ಕಲಬುರಗಿ : ಕಳೆದ ಜುಲೈ-ಆಗಸ್ಟ್ ಮಾಹೆಯಲ್ಲಿ ಸುರಿದ ಮಳೆಯಿಂದ ರಾಜ್ಯದಲ್ಲಾದ ಬೆಳೆ ಹಾನಿಗೆ ಕಳೆದ ಒಂದು ವಾರದಲ್ಲಿ 300 ಕೋಟಿ ರೂ. ಗಳಿಗೂ ಹೆಚ್ಚು ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನ ರಸ್ತೆಯಲ್ಲಿ 18.50 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳೆ ಹಾನಿ ಕುರಿತಂತೆ ಡಿಸಿ. ಅವರಿಂದ ವರದಿ ಪಡೆದುಕೊಂಡು ತಕ್ಷಣ ಪರಿಹಾರ ನೀಡಲಾಗುತ್ತಿದೆ. ಹಿಂದೆಲ್ಲ ಪರಿಹಾರ ನೀಡಲು ವರ್ಷಗಟ್ಟಲೆ ಬೇಕಾಗುತಿತ್ತು. ಇದೀಗ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿದ ಕೂಡಲೆ ರೈತರಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.
ಒಣ ಬೇಸಾಯದ ಪ್ರತಿ ಹೆಕ್ಟೇರ್ಗೆ 6,800 ರೂ. ಗಳಿಂದ 13,600 ರೂ.ಗಳಿಗೆ, ನೀರಾವರಿ ಪ್ರದೇಶದ ಪ್ರತಿ ಹೆಕ್ಟೇರ್ಗೆ 13,000 ರೂ. ಗಳಿಂದ 25,000 ರೂ. ಗಳಿಗೆ ಹಾಗೂ ತೋಟಗಾರಿಕೆ ಪ್ರದೇಶದ ಪ್ರತಿ ಹೆಕ್ಟೇರ್ಗೆ 18,000 ರೂ. ಗಳಿಂದ 28,000 ರೂ. ಗಳಿಗೆ ಬೆಳೆ ಪರಿಹಾರ ಹೆಚ್ಚಿಸಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಮೀರಿ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ಅನ್ನದಾತನಿಗೆ ನಮ್ಮ ಸರ್ಕಾರ ನೀಡಿದೆ ಎಂದು ಬಸವರಾಜ ಬೊಮ್ಮಾಯಿ ತಿಳೀಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಐತಿಹಾಸಿಕವಾಗಿ 3,000 ಕೋಟಿ ರೂ. ನೀಡಿದ್ದು, ನಾಲ್ಕೇ ತಿಂಗಳಿನಲ್ಲಿ ಅಷ್ಟು ಮೊತ್ತಕ್ಕೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಕೆಲಸ ಆರಂಭಿಸಿದ್ದೇವೆ. ಈ ವರ್ಷದಲ್ಲಿಯೇ ಇದರ ಅನುಷ್ಠಾನಕ್ಕೆ ಒತ್ತು ನೀಡಿದ್ದೇವೆ. ಬಹುಜನರ ಬೇಡಿಕೆಯಂತೆ ಹೈ.ಕ.ಕೋಶ ಸಹ ಇಲ್ಲಿಗೆ ವರ್ಗಾಯಿಸಲಾಗುವುದು ಎಂದರು.
ಯು.ಕೆ.ಪಿ. ಕೃಷ್ಣಾ ನ್ಯಾಯಾಧೀಕರಣದಲ್ಲಿ ಪ್ರದೇಶಕ್ಕೆ ಹಂಚಿಕೆಯಾದ ನೀರು ಬಳಸಲು ಇನ್ನೂ ಅಧಿಸೂಚನೆ ಹೊರಡಿಸಿಲ್ಲ ಎಂದು ಪತ್ರತರ್ಕರು ಸಿ.ಎಂ. ಅವರ ಗಮನ ಸೆಳೆದಾಗ, ಸುಪ್ರೀಂ ಕೋರ್ಟ್ನ ಪೀಠದಲ್ಲಿದ್ದ ಮಹಾರಾಷ್ಟ್ರ, ಆಂಧ್ರ ಪ್ರದೇಶಕ್ಕೆ ಸೇರಿದ ಇಬ್ಬರು ನ್ಯಾಯಾಧೀಶರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಇದೀಗ ಹೊಸ ಮುಖ್ಯ ನ್ಯಾಯಾಧೀಶರ ನೇಮಕವಾಗಿದ್ದು, ಪೀಠಕ್ಕೆ ಹೊಸ ನ್ಯಾಯಾಧೀಶರನ್ನು ನೇಮಕ ಮಾಡಲು ನಮ್ಮ ವಕೀಲರ ಮೂಲಕ ಕೋರಲಾಗುತ್ತಿದೆ. ತೀರ್ಪ ಇತ್ಯರ್ಥವಾದ ಬಳಿಕ ಆಲಮಟ್ಟ ಜಲಾಶಯ ಎತ್ತರ 524 ಮೀಟರ್ಗೆ ಏರಿಸಿ 9 ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.
ಶೇ.8ರ ಮೀಸಲಾತಿ ಸಿಗಲಿದೆ:
ಕಲ್ಯಾಣ ಕರ್ನಾಟಕ ಭಾಗದ ರಾಜ್ಯದ ಇತರೆಡೆ ಶೇ.8ರ ಮೀಸಲಾತಿಯನ್ನು ಶಿಕ್ಷಣ, ಉದ್ಯೋಗ ಮತ್ತು ಮುಂಬಡ್ತಿಯಲ್ಲಿ ನೀಡಲಾಗುವುದು. ಕೆಲವೊಂದು ಅಡಚಣೆಗಳಿತ್ತು. ಅದನ್ನೆಲ್ಲ ಇದೀಗ ನಿವಾರಿಸಲಾಗಿದೆ. ಸ್ಥಳೀಯರಿಗೆ ಕಲ್ಯಾಣ ಕರ್ನಾಟಕ ಹೊರತುಪಡಿಸಿದ ಪ್ರದೇಶದಕಲ್ಲಿ ಶೇ.8ರಷ್ಟು ಮೀಸಲಾತಿ ನೀಡಲಾಗುವುದು ಎಂದರು.
ವಿಮ್ಸ್ ಘಟನೆ ತನಿಖೆ ನಡೆಯುತ್ತಿದೆ:
ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಐ.ಸಿ.ಯೂ ವಿಭಾಗದಲ್ಲಿ ವಿದ್ಯುತ್ ಕೈಕೊಟ್ಟು ಮೃತರಾದ ಪ್ರಕರಣ ಕುರಿತಂತೆ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಕರಣದ ತನಿಖೆಗೆ ಆದೇಶಿಸಿದೆ. ಅಧಿಕಾರಿಗಳಿಂದ ವರದಿ ಬಂದ ಕೂಡಲೆ ಮುಂದಿನ ಕ್ರಮ ವಹಸಿಲಾಗುವುದು ಎಂದರು.
ಕೇಂದ್ರ ರಸಾಯನಿಕ, ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಇಲಾಖೆಯ ರಾಜ್ಯ ಸಚಿವ ಭಗವಂತ ಖೂಬಾ, ಗೃಹ ಸಚಿವ ಆರಗ ಜ್ಞಾನೇಂದ್ರ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಮುರುಗೇಶ ಆರ್. ನಿರಾಣಿ, ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಸಚಿವ ಮುನಿರತ್ನ, ಕಲಬುರಗಿ ದಕ್ಷಿಣ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ, ಕೆ.ಕೆ.ಆರ್.ಟಿ.ಟಿ ಮತ್ತು ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಸಂಸದ ಡಾ. ಉಮೇಶ ಜಾಧವ, ವಿಧಾನಸಭೆ ಶಾಸಕ ಬಸವರಾಜ ಮತ್ತಿಮಡು, ಡಾ. ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ಡಾ. ಬಿ.ಜಿ.ಪಾಟೀಲ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದ್ರಕಾಂತ ಜಿ. ಪಾಟೀಲ (ಚಂದು ಪಾಟೀಲ) ಇದ್ದರು.