ಮೈಸೂರು: ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನಕ್ಕೆ ಸಂಸದ ಪ್ರತಾಪ್ ಸಿಂಹ ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಶಾಂತಿ ಕೊಡಲಿ ಎಂದು ಪಾರ್ಥನೆ ಸಲ್ಲಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಆಳುವ ದೊರೆಗಳ ಗಮನ ಸೆಳೆಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದರು. ಅವರಿಗೆ ಚಾಟಿ ಏಟು ನೀಡಲು ಈ ರೀತಿ ಹೇಳುತ್ತಿದ್ದರು. ನಾವು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಅಷ್ಟೇ ಎಂದರು.
ಉಮೇಶ್ ಕತ್ತಿ ನೇರ ನುಡಿಯ ರಾಜಕಾರಣಿ. ಅವರ ಅಗಲಿಕೆಯಿಂದ ಉತ್ತರ ಕರ್ನಾಟಕದ ದೊಡ್ಡ ಧ್ವನಿ ಹುದುಗಿ ಹೋಗಿದೆ. ಪ್ರತ್ಯೇಕ ರಾಜ್ಯ ಹೇಳಿಕೆ, ವಿಭಜನೆಯ ಪರ ಅಂತಾ ವಿವಾದವಾಗಿತ್ತು. ಅಭಿವೃದ್ದಿ ವಿಚಾರವಾಗಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ್ದರು ಎಂದರು.
ಬಾಯಿ ಮತ್ತು ಹೃದಯದ ಮಧ್ಯೆ ಫಿಲ್ಟರ್ ಇಲ್ಲದೆ, ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ ನೇರನುಡಿಯ ನಾಯಕ, ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಭಾವಪೂರ್ಣ ಶ್ರದ್ಧಾಂಜಲಿ. 😭 pic.twitter.com/1RcrQEmmpK
— Pratap Simha (@mepratap) September 6, 2022