ಬೆಂಗಳೂರು: ವಿದ್ಯಾರ್ಥಿಗಳನ್ನು ವೃತ್ತಿ ಮತ್ತು ಬದುಕಿಗೆ ಸಜ್ಜುಗೊಳಿಸುವ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮತ್ತು ರಾಜ್ಯ ಸರ್ಕಾರದ ಎಲ್ಲ ವಿ.ವಿ.ಗಳು ( University ), ಐಟಿ ದಿಗ್ಗಜ ಇನ್ಫೋಸಿಸ್ ( Infosys ) ಸಂಸ್ಥೆ ಜತೆ ಮಂಗಳವಾರ ಒಡಂಬಡಿಕೆಗೆ ಅಂಕಿತ ಹಾಕಿದವು. ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಅವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ಈ ಕಾರ್ಯಕ್ರಮ ನಡೆಯಿತು.
ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ ಮತ್ತು ಇನ್ಫೋಸಿಸ್ನ ತಿರುಮಲ ಆರೋಹಿ ಒಡಂಬಡಿಕೆ ವಿನಿಮಯ ಮಾಡಿಕೊಂಡರು. ಉಳಿದಂತೆ ಬೆಂಗಳೂರು, ಮಂಗಳೂರು, ಮೈಸೂರು, ಕರ್ನಾಟಕ, ತುಮಕೂರು, ಗುಲ್ಬರ್ಗ, ಕುವೆಂಪು, ಸಂಗೀತ, ಜಾನಪದ ಸೇರಿದಂತೆ ಎಲ್ಲಾ 24 ವಿ.ವಿ.ಗಳ ಕುಲಪತಿಗಳು ಹಾಜರಿದ್ದು, ಒಡಂಬಡಿಕೆ ಹಸ್ತಾಂತರಿಸಿ ಕೊಂಡರು.
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, `ಇನ್ಫೋಸಿಸ್ ಸಂಸ್ಥೆಯು ಸಮಾಜದ ಒಳಿತಿಗಾಗಿ ತನ್ನ ಜ್ಞಾನ ಪರಿಣತಿಯನ್ನು ಹಂಚಿಕೊಳ್ಳಲು ಮುಂದೆ ಬಂದಿದೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅದು ರೂಪಿಸಿರುವ ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ (https://infyspringboard.onwingspan.com) ವ್ಯವಸ್ಥೆಯಡಿ 12,300 ಕೋರ್ಸುಗಳು ಉಚಿತವಾಗಿ ಲಭ್ಯವಿವೆ. 6ನೇ ತರಗತಿಯಿಂದ ಪಿಎಚ್ ಡಿ ವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಈ ಕೋರ್ಸ್ ಗಳನ್ನು ಆನ್ ಲೈನ್ ನಲ್ಲಿ ಕಲಿಯಬಹುದು. ಜತೆಗೆ, ಅದು 800ಕ್ಕೂ ಹೆಚ್ಚು ಶಿಕ್ಷಣ ಪರಿಣತರ ನೆರವನ್ನು ಉನ್ನತ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದಕ್ಕೆ ನೀಡಲಿದೆ’ ಎಂದರು.
ಈ ಸಲುವಾಗಿ ಇನ್ಫೋಸಿಸ್ ಸುಮಾರು ನೂರು ಕೋಟಿ ಖರ್ಚು ಮಾಡಿರುವುದು ಮೆಚ್ಚುವಂತಹದ್ದು ಎಂದು ಅವರು ಹೇಳಿದರು.
ಈ ಒಡಂಬಡಿಕೆಯಿಂದಾಗಿ ನಮ್ಮ ವಿ.ವಿ.ಗಳು ಸ್ಪ್ರಿಂಗ್ಬೋರ್ಡ್ ವೇದಿಕೆಯಲ್ಲಿರುವ ಕೋರ್ಸುಗಳನ್ನು ಪರಿಣಮಕಾರಿಯಾಗಿ ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಈ ಮೂಲಕ ವಿ.ವಿ.ಗಳು ತಮ್ಮ ಪಠ್ಯಕ್ರಮಗಳನ್ನು ಪ್ರಸ್ತುತಗೊಳಿಸಿಕೊಳ್ಳಬೇಕು. ಬಳಿಕ, ಇವುಗಳ ಮೂಲಕ ಬೋಧಕರಿಗೆ ಹಲವು ಉಪಯುಕ್ತ ಬೋಧನಾ ತಂತ್ರಗಳನ್ನು ಕಲಿಸಬೇಕು. ಜತೆಗೆ ಇಲ್ಲಿರುವ ಪರಿಣತರನ್ನು ಕಾಲೇಜುಗಳು ಮತ್ತು ವಿ.ವಿ.ಗಳು ತಮ್ಮ ಅಧ್ಯಯನ ಮಂಡಲಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ಜಾಗತಿಕ ಗುಣಮಟ್ಟದ ಶಿಕ್ಷಣ ಇಂದಿನ ತುರ್ತುಗಳಲ್ಲಿ ಒಂದಾಗಿದೆ. ಇದು ಸಾಧ್ಯವಾಗಬೇಕೆಂದರೆ ದಕ್ಷ ಬೋಧಕ ವೃಂದ ಮತ್ತು ಸಮಕಾಲೀನ ಅಗತ್ಯಗಳಿಗೆ ಸ್ಪಂದಿಸುವ ಪಠ್ಯಕ್ರಮ ಅತ್ಯಗತ್ಯವಾಗಿವೆ. ಹೀಗಾಗಿ ಸರಕಾರವು ಉನ್ನತ ಶಿಕ್ಷಣ ವಲಯವನ್ನು ಅಂತಾರಾಷ್ಟ್ರೀಕರಣ ಪ್ರಕ್ರಿಯೆಗೆ ತೆರೆದಿದ್ದು, ಜಗತ್ತಿನ ಅತ್ಯುತ್ತಮ ಸಂಸ್ಥೆಗಳು ಮತ್ತು ಉದ್ಯಮಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಾಸ್ಕಾಂ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಸಂಸ್ಥೆಗಳೊಂದಿಗೆ ಇಂತಹ ಉಪಕ್ರಮ ಆರಂಭಿಸಲಾಗಿದ್ದು, ಆಧುನಿಕ ಕೋರ್ಸುಗಳನ್ನು ಕಲಿಕೆಯಲ್ಲಿ ಕಡ್ಡಾಯಗೊಳಿಸಲಾಗಿದೆ. ಇನ್ಫೋಸಿಸ್ ಜತೆಗಿನ ಈ ಒಡಂಬಡಿಕೆ ಮೈಲಿಗಲ್ಲಾಗಿದೆ ಎಂದು ಅವರು ವಿವರಿಸಿದರು.
ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ವ್ಯವಸ್ಥೆಯಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ನೂತನ ಮತ್ತು ಡಿಜಿಟಲ್ ತಂತ್ರಜ್ಞಾನದ ಕಲಿಕೆ ಸಾಧ್ಯವಾಗಲಿದೆ. ಪರಿಣಾಮಕಾರಿ ಕಲಿಕೆಗೆ ಆನ್ಲೈನ್ ವ್ಯವಸ್ಥೆಯನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಇದು ಸಾಬೀತು ಪಡಿಸಲಿದೆ. ವರ್ಚುಯಲ್ ತರಗತಿಗಳನ್ನು ನಡೆಸುವ ಮೂಲಕ, ಆನ್ಲೈನ್ನಲ್ಲೇ ವಿದ್ಯಾರ್ಥಿಗಳ ಮೌಲ್ಯಮಾಪನವನ್ನೂ ಕೈಗೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.
ಬೋಧಕರು ತಮ್ಮ ಸಂಸ್ಥೆಗಳ ಪರವಾಗಿ ಸ್ಪ್ರಿಂಗ್ಬೋರ್ಡ್ ಮೂಲಕ ಮೈಕ್ರೋಸೈಟ್ಗಳನ್ನು ತೆಗೆಯಬಹುದು. ಇದರಿಂದಾಗಿ ಪದವಿ ಮತ್ತು ಸ್ನಾತಕೋತ್ತರ ಹಂತದ ಕೋರ್ಸುಗಳಿಗೆ ಆಧುನಿಕ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಅತ್ಯುತ್ತಮ ಅವಕಾಶವಿದೆ ಎಂದು ಅಶ್ವತ್ಥನಾರಾಯಣ ನುಡಿದರು.
ವಿಟಿಯು ರೀತಿಯಲ್ಲಿ ಎಲ್ಲ ವಿವಿಗಳು ಕೂಡ ಉದ್ಯಮಗಳ ಮುಖ್ಯ ತಾಂತ್ರಿಕ ಅಧಿಕಾರಿಗಳನ್ನು ತಮ್ಮ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇನ್ಫೋಸಿಸ್ ಸಂಸ್ಥೆಯ ಶಿಕ್ಷಣ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ತಿರುಮಲ ಆರೋಹಿ ಮಾತನಾಡಿ, ಸ್ಪ್ರಿಂಗ್ಬೋರ್ಡ್ ಮೂಲಕ ಬೋಧಕರ ಅಗತ್ಯಗಳನ್ನು ಮನಗಂಡು, ಸೂಕ್ತ ತರಬೇತಿ ಕೊಡಲಾಗುವುದು ಇದಕ್ಕಾಗಿ ವಾರ್ಷಿಕ ಯೋಜನೆಯನ್ನು ರೂಪಿಸಲಾಗುವುದು. ಈ ಮೂಲಕ ವಿ.ವಿ.ಗಳು ಮತ್ತು ಅಧೀನ ಕಾಲೇಜುಗಳ ಬೋಧಕರನ್ನು ಜಾಗತಿಕ ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಳಿಸಲಾಗುವುದು. ನಿಗದಿತವಾಗಿ ಇದರ ಪ್ರಗತಿಯ ಪರಾಮರ್ಶೆಯೂ ನಡೆಯಲಿದೆ ಎಂದರು.
ಪ್ರವಾಹ ಪರಿಶೀಲನೆ ಸಭೆಯಲ್ಲಿ ‘ಸಚಿವ ಆರ್ ಅಶೋಕ್’ ಪುಲ್ ನಿದ್ದೆ: ‘ಚಿಂತೆ ಇಲ್ಲದವಗೆ ಸಂತೆಲೂ ನಿದ್ದೆ’ ಎಂದ ಕಾಂಗ್ರೆಸ್
2025ರ ವೇಳೆಗೆ ಒಂದು ಕೋಟಿ ಯುವಜನರಿಗೆ ಡಿಜಿಟಲ್ ಮತ್ತು ಜೀವನ ಕೌಶಲ್ಯಗಳನ್ನು ಕಲಿಸುವುದು ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ನ ಗುರಿಯಾಗಿದೆ. ಇದರಲ್ಲಿ 10ರಿಂದ 22 ವರ್ಷದೊಳಗಿನ ಯುವಜನರತ್ತ ಗಮನವನ್ನು ಕೇಂದ್ರೀಕರಿಸಿದ್ದೇವೆ. ಇದು ಭಾರತೀಯ ಭಾಷೆಗಳಲ್ಲೂ ಲಭ್ಯವಿದ್ದು, ಈಗಾಗಲೇ 23 ಲಕ್ಷ ವಿದ್ಯಾರ್ಥಿಗಳು ದೇಶಾದ್ಯಂತ ಸ್ಪ್ರಿಂಗ್ಬೋರ್ಡ್ ವೇದಿಕೆಯಲ್ಲಿ ಕಲಿಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ ಮತ್ತು ರಾಜ್ಯದ ಎಲ್ಲ ವಿ.ವಿ.ಗಳ ಕುಲಪತಿಗಳು ಉಪಸ್ಥಿತರಿದ್ದರು. ಇನ್ಫೋಸಿಸ್ ಪರವಾಗಿ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಸಂತೋಷ ಅನಂತಪುರ, ಸ್ಪ್ರಿಂಗ್ಬೋರ್ಡ್ ವಿಭಾಗದ ಮುಖ್ಯಸ್ಥ ವಿಕ್ಟರ್ ಸುಂದರರಾಜ್ ಹಾಜರಿದ್ದರು. ಉನ್ನತ ಶಿಕ್ಷಣ ಪರಿಷತ್ತಿನ ಆಡಳಿತಾಧಿಕಾರಿ ಡಾ.ತಾಂಡವಗೌಡ ವಂದಿಸಿದರು.
ಸ್ಪ್ರಿಂಗ್ಬೋರ್ಡ್ ಕೋರ್ಸ್ಗಳತ್ತ ಪಕ್ಷಿನೋಟ
ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ವೇದಿಕೆಯ ಮೂಲಕ ವಿದ್ಯಾರ್ಥಿಗಳು ಉಚಿತವಾಗಿ ಜಾವಾ, ಪೈಥಾನ್, ಸಿ# ಮುಂತಾದ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ಗಳು, ಬ್ಯಾಂಕಿಂಗ್, ಸ್ಪೇಸ್ ನೆಟ್ವರ್ಕ್, ರೀಟೇಲ್ ಟೆಲಿಕಾಂ, ಉದ್ಯಮಗಳಿಗೆ ಬೇಕಾದ ಮೂಲಭೂತ ಕೌಶಲ್ಯಗಳು ಮುಂತಾದವನ್ನು ಕಲಿಯಲು ಅವಕಾಶವಿದೆ. ಇದಲ್ಲದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಗ್ ಡೇಟಾ, ಅನಲಿಟಿಕ್ಸ್, ಬ್ಲಾಕ್ ಚೈನ್, ಎಪಿಐ ಎಕಾನಮಿ, ಕೋಡಿಂಗ್, ಕ್ಲೌಡ್ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ, ಡಿಸೈನ್ ಥಿಂಕಿಂಗ್, ಡೇಟಾ ವಿಶುಯಲೈಸೇಷನ್, ಎಡ್ಜ್ ಕಂಪ್ಯೂಟಿಂಗ್, ಡೇಟಾ ಪ್ರೈವೆಸಿ ಮತ್ತು ಸೆಕ್ಯುರಿಟಿ (ಇ-ಸುರಕ್ಷತೆ) ಇವುಗಳನ್ನು ಕೂಡ ಕಲಿಯಬಹುದು. ಇದಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್ ಕೂಡ ಕೋರ್ಸೆರಾ, ಸ್ಕಿಲ್ಸಾಫ್ಟ್, ಐಐಎಚ್ಟಿ, ಲರ್ನ್ಶಿಪ್ ಮುಂತಾದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು https://infyspringboard.onwingspan.com ನೋಡಬಹುದು.
ಹಲವು ಸಂಸ್ಥೆಗಳ ಸಕ್ರಿಯ ಪಾತ್ರ
ಒಡಂಬಡಿಕೆಗೆ ಸರಕಾರದ ಪರವಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ವಿಟಿಯು, ರಾಜ್ಯದ ಸಾರ್ವಜನಿಕ ವಿ.ವಿ.ಗಳು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ, ಬೇಸ್ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿ.ವಿ.ಗಳು ಸಹಿ ಹಾಕಿದವು. ಇನ್ಫೋಸಿಸ್ ಪರವಾಗಿ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಸಂತೋಷ್ ಅನಂತಪುರ, ಸ್ಪ್ರಿಂಗ್ಬೋರ್ಡ್ ವಿಭಾಗದ ಮುಖ್ಯಸ್ಥ ವಿಕ್ಟರ್ ಸುಂದರರಾಜ್ ಉಪಸ್ಥಿತರಿದ್ದರು.