ಬೆಂಗಳೂರು: ಯಾವ ಶಿಕ್ಷಕ ತನ್ನ ದೈನಂದಿನ ಪಾಠದ ಜೊತೆಗೆ ಜೀವನದ ಮೌಲ್ಯದ ಕೊಂಡಿಯನ್ನು ಬೆಸೆಯುತ್ತಾನೆಯೋ ಆತನೇ ನಿಜವಾದ ಶಿಕ್ಷಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಇಂದು ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಗುರುಗಳು ವಿದ್ಯಾರ್ಥಿಗಳನ್ನು ತಮ್ಮ ಭಾಷೆ ಅಭಿವ್ಯಕ್ತಿ ಮೂಲಕ ಕಲಿಕೆಯನ್ನು ಉತ್ತೇಜಿಸಬೇಕು. ಜೊತೆಗೆ ಜೀವನ ಮೌಲ್ಯಗಳನ್ನು ಪಠ್ಯದ ಮೂಲಕ ಅಳವಡಿಸಿಕೊಳ್ಳಬೇಕು. ಅದಕ್ಕಾಗಿಯೇ ಇಂದಿಗೂ ನಮಗೆ ಸ್ವಾಮಿ ವಿವೇಕಾನಂದರು ಅತ್ಯಂತ ಪ್ರೇರಣಾ ಶಕ್ತಿಯಾಗಿರುವರು. ಅಲ್ಲದೆ ಶಿಕ್ಷಕರು ಸ್ವತಃ ಜೀವನದ ಮೌಲ್ಯಗಳನ್ನು, ಮುಗ್ದತೆ ಮತ್ತು ಸಂವೇಧನ ಶೀಲತೆಯನ್ನು ಎಂದಿಗೂ ಕಾಪಾಡುವಂತಿರಬೇಕು ಎಂದು ತಿಳಿಸಿದರು.
ಹೊಸ ಶಿಕ್ಷಣ ಪದ್ದತಿಯನ್ನು ತಂದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಏಳಿಗೆಯನ್ನು ಸಂಭ್ರಮಿಸುವ ಮನಸ್ಥಿತಿ ಉಳ್ಳವರಾಗಬೇಕು ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಮಾತನಾಡಿ ಪ್ರಸ್ತುತ ವರ್ಷದಲ್ಲಿ ಉನ್ನತ ಶಿಕ್ಷಣಕ್ಕೆ ಸರ್ಕಾರ ಕಳೆದ ವರ್ಷಕ್ಕಿಂತ ಸಾವಿರ ಕೋಟಿ ಹೆಚ್ಚುವರಿ ಅನುದಾನ ನೀಡಿದೆ. ಕಾಲೇಜು ಉಪನ್ಯಾಸಕರ ನೇಮಕಾತಿಯನ್ನು ಪೂರ್ಣಗೊಳಿಸಿದೆ. ಸದ್ಯ 14 ಹೊಸ ವಿಶ್ವ ವಿದ್ಯಾಲಯಗಳಲ್ಲಿ 6 ವಿಶ್ವವಿದ್ಯಾಲಯಗಳು ಪೂರ್ಣಗೊಂಡಿದ್ದು, ಇನ್ನು 8 ವಿಶ್ವವಿದ್ಯಾಲಯಗಳು ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಜರುಗಿಸಲಾಗಿದೆ. ಆದಷ್ಟು ಶೀಘ್ರವೇ ಅವುಗಳು ಸಹ ಪೂರ್ಣವಾಗುವುದು ಎಂದು ತಿಳಿಸಿದರು.
ಈಗಾಗಲೇ 375 ಅಧ್ಯಾಪಕರುಗಳಿಗೆ ಪ್ರೊಪೆಸರ್ ಹಂತಕ್ಕೆ ಬಡ್ತಿ ನೀಡಲಾಗಿದೆ. 2015ರಿಂದ ಬಾಕಿ ಉಳಿದಿರುವ ಶಿಕ್ಷಕರ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಕೂಡಲೇ ಎಲ್ಲಾ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗುವುದು. ಹೊಸ ಶಿಕ್ಷಣ ಪದ್ದತಿಯಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶ ಸಿಕ್ಕಿದೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗದಗದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಶಿಕ್ಷಕರಿಗೆ ಆರ್ಶಿವಚನ ನೀಡಿದರು.
ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಪ್ರಾಂಶುಪಾಲರುಗಳು, ಉಪನ್ಯಾಸಕರುಗಳು, ಉಪಸ್ಥಿತರಿದ್ದರು.