ನವದೆಹಲಿ: ಶಾಲಾ ಮತ್ತು ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದ ಕರ್ನಾಟಕ ಸರ್ಕಾರದ ಆದೇಶ ಎತ್ತಿ ಹಿಡಿದ ರಾಜ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ನಲ್ಲಿ ನಡೆಯುತ್ತಿರುವ ಅರ್ಜಿ ವಿಚಾರಣೆಯನ್ನು ಇದೇ 7ಕ್ಕೆ ಮುಂದೂಡಲಾಗಿದೆ.
ಹಿಜಾಬ್ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗಳನ್ನು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್, ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನ್ಯಾಯಪೀಠ 7ಕ್ಕೆ ಹಿಜಾಬ್ ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್, ಸಾಂವಿಧಾನಿಕ ಮಹತ್ವದ ಇಂತಹ ವಿಷಯವನ್ನು non-miscellaneous day ದಿನದಂದು ವಿಚಾರಣೆ ನಡೆಸಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ವಿಚಾರಣೆಯನ್ನು ಮುಂದೂಡುವಂತೆ ಅರ್ಜಿದಾರರ ಮನವಿಯನ್ನು ವಿರೋಧಿಸಿದರು.
ಇದಕ್ಕೂ ಮೊದಲು ಆಗಸ್ಟ್ 29 ರಂದು, ಅರ್ಜಿಗಳ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್, ಈ ವಿಷಯದಲ್ಲಿ ಅರ್ಜಿದಾರರು ಪದೇ ಪದೇ ಮುಂಚಿತವಾಗಿ ವಿಚಾರಣೆಯನ್ನು ಕೋರಿದ್ದಾರೆ ಮತ್ತು ಈ ಅರ್ಜಿಗಳನ್ನು ಪಟ್ಟಿ ಮಾಡಿದಾಗ, ಮುಂದೂಡುವಂತೆ ಕೋರಿ ಪತ್ರವನ್ನು ರವಾನಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.