ಹುಬ್ಬಳ್ಳಿ: ಈಗಾಗಲೇ 545 ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದಿಂದಾಗಿ ( PSI Recruitment Scam ) ನೇಮಕಾತಿ ರದ್ದಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಖಾಲಿ ಇರುವಂತ 900 ಪಿಎಸ್ಐ ಹುದ್ದೆಗಳ ನೇಮಕಕ್ಕೆ ( PSI Recruitment 2022 ) ಶೀಘ್ರವೇ ಅರ್ಜಿಯನ್ನು ಕರೆಯಲಾಗುತ್ತದೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ( Home Minister Araga Jnanendra ) ಘೋಷಣೆ ಮಾಡಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಎಂಟು ತಿಂಗಳ ಹಿಂದೆಯಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದ ಎರಡು ಪೊಲೀಸ್ ಠಾಣೆಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಉದ್ಘಾಟಿಸಿರುವುದು ಅನುಕರಣೀಯ ಸಂಗತಿಯಾಗಿದೆ. ಈ ಹಿಂದೆ ವರ್ಷಕ್ಕೆ ರಾಜ್ಯದಲ್ಲಿ 2 ರಿಂದ 3 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿತ್ತು .ಈಗ ವಾರ್ಷಿಕ 100 ಕ್ಕೂ ಹೆಚ್ಚು ಠಾಣೆಗಳನ್ನು ನಿರ್ಮಿಸಲಾಗುತ್ತಿದೆ. ಶೇ.35 ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣವನ್ನು ಶೇ.12 ಕ್ಕೆ ಇಳಿಕೆ ಮಾಡಲಾಗಿದೆ ಎಂದರು.
ಶೀಘ್ರದಲ್ಲಿಯೇ 900 ಪಿಎಸ್ಐಗಳ ನೇಮಕಾತಿ ನಡೆಯಲಿದೆ. ನೇಮಕಾತಿಯಲ್ಲಿ ಶೇ.20 ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.ಪೊಲೀಸ್ ಇಲಾಖೆಗೆ ಈ ವರ್ಷ ಅತ್ಯಂತ ಸವಾಲಿನದಾಗಿತ್ತು.ಹುಬ್ಬಳ್ಳಿ ಗಲಭೆಯನ್ನು ಇಲ್ಲಿನ ಪೊಲೀಸ್ ಆಯುಕ್ತ ಲಾಭೂರಾಮ್ ನೇತೃತ್ವದ ತಂಡ ಅತ್ಯಂತ ಸಮರ್ಥವಾಗಿ ಹಾಗೂ ಕ್ಷಿಪ್ರವಾಗಿ ತಹಬಂದಿಗೆ ತರುವ ಮೂಲಕ ಇಲ್ಲಿನ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪೊಲೀಸರ ಕಾರ್ಯದಕ್ಷತೆ ಹೆಚ್ಚಳಕ್ಕೆ, ಮೂಲಭೂತ ಸೌಕರ್ಯಗಳುಳ್ಳ ಠಾಣೆಗಳು, ತರಬೇತಿ ಕೇಂದ್ರಗಳು ಅಗತ್ಯ.ಬೆಂಗಳೂರಿನ ನಂತರ ರಾಜ್ಯದ ಎರಡನೇ ಅತಿದೊಡ್ಡ ಶಹರಗಳೆನಿಸಿರುವ ಹುಬ್ಬಳ್ಳಿ ಧಾರವಾಡ ಅವಳಿನಗರದ ಸಂಚಾರ ನಿರ್ವಹಣೆಗೆ ಸ್ಥಾಪಿಸಲು ಉದ್ದೇಶಿಸಿರುವ ಟ್ರಾಫಿಕ್ ಕಮಾಂಡ್ ಕಂಟ್ರೋಲ್ ಸೆಂಟರ್ 3.93 ಕೋಟಿ ರೂ.ಬಿಡುಗಡೆಯಾಗಿದೆ. ಇನ್ನು 4 ಕೋಟಿ ರೂ.ಗಳ ಅಗತ್ಯವಿದೆ. ರಾಜ್ಯ ಸರ್ಕಾರ ಕೂಡಲೇ ಅನುದಾನ ಒದಗಿಸಿ ತ್ವರಿತವಾಗಿ ಈ ಕೇಂದ್ರ ಸ್ಥಾಪಿಸಬೇಕು. ಬಾಂಬ್ ನಿಷ್ಕ್ರಿಯ ಘಟಕವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಬೇಕು.ಸರದಿಯಾಧಾರದಲ್ಲಿ ಪೊಲೀಸರಿಗೆ ಕರ್ತವ್ಯ ವಹಿಸಿ ಅವರ ಹಿತ ಕಾಯಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಹುಬ್ಬಳ್ಳಿ ಧಾರವಾಡ ಅವಳಿ ನಗರದ ರಸ್ತೆ ಸುಧಾರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾಕಷ್ಟು ನೆರವು ನೀಡಿದ್ದಾರೆ.ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರದ ಸ್ಥಾಪನೆಗೆ ಮುಖ್ಯಮಂತ್ರಿಯವರು ಮುತುವರ್ಜಿ ವಹಿಸಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ಹುಬ್ಬಳ್ಳಿಯಲ್ಲಿ ಈಗಾಗಲೇ ಎಂಟು ತಿಂಗಳ ಅವಧಿಯಲ್ಲಿ ಎರಡು ಪೊಲೀಸ್ ಠಾಣೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಇಂದು ಶಂಕುಸ್ಥಾಪನೆಯಾಗಿರುವ ಮೂರು ಠಾಣೆಗಳನ್ನೂ ಕೂಡ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು. ಕೋರ್ಟಿನಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಶೇ.8 ರಿಂದ 10 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗುತ್ತಿವೆ. ಸೂಕ್ತ ಸಾಕ್ಷ್ಯಾಧರಗಳನ್ನು ಒದಗಿಸಿ ಶಿಕ್ಷೆಯ ಪ್ರಮಾಣವನ್ನು ಶೇ.60 ರಿಂದ 70 ಕ್ಕೆ ಏರಿಸಬೇಕು. ಈ ಹಿಂದೆ ವಿವಿಧ ಹೋರಾಟಗಳಲ್ಲಿ ಭಾಗವಹಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಆರೋಪಮುಕ್ತರಾಗಿರುವವರು ಈವರೆಗೂ ರೌಡಿಶೀಟರ್ಗಳಾಗಿ ಮುಂದುವರೆದಿದ್ದಾರೆ. ಅದನ್ನು ಪರಿಶೀಲಿಸಿ ಪಟ್ಟಿಯಿಂದ ಅಂತಹ ವ್ಯಕ್ತಿಗಳನ್ನು ಕೈ ಬಿಡಬೇಕು ಎಂದರು.