ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಬಿಐ ದಾಳಿಯ ಬಗ್ಗೆ ಮತ್ತೊಮ್ಮೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಆಮ್ ಆದ್ಮಿ ಪಕ್ಷದ (AAP) ನಾಯಕರನ್ನ ಮುಜುಗರಕ್ಕೀಡು ಮಾಡುವ ಕೇಂದ್ರ ಸರ್ಕಾರದ ಯೋಜನೆಯು ಅವರಿಗೆ ಹಿನ್ನಡೆಯನ್ನುಂಟು ಮಾಡುತ್ತಿದೆ” ಎಂದಿದ್ದಾರೆ.
“ಮನೀಶ್ ಸಿಸೋಡಿಯಾ ಅವರ ಮೇಲಿನ ದಾಳಿಯ ನಂತರ ಗುಜರಾತ್ನಲ್ಲಿ ಎಎಪಿಯ ಮತಗಳಿಕೆ ಪ್ರಮಾಣವು ಶೇಕಡಾ 4ರಷ್ಟು ಹೆಚ್ಚಾಗಿದೆ. ಅವ್ರನ್ನ ಬಂಧಿಸಿದರೆ, ಅದು ಶೇಕಡಾ 6ಕ್ಕೆ ಏರುತ್ತದೆ. ಆಪರೇಷನ್ ಕಮಲ ವಿಫಲವಾಗುತ್ತದೆ ಎಂದು ಹೇಳಲು ನಾವು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತವನ್ನ ಮಂಡಿಸಿದ್ದೇವೆ. ನಮ್ಮ ಯಾವೊಬ್ಬ ಶಾಸಕರೂ ಪಕ್ಷ ಬದಲಿಸುತ್ತಿಲ್ಲ. ನನ್ನ ಇಬ್ಬರು ಮಕ್ಕಳು ಐಐಟಿಯಲ್ಲಿ ಓದುತ್ತಿದ್ದಾರೆ. ನಾನು ಭಾರತದ ಪ್ರತಿ ಮಗುವಿಗೆ ಅಂತಹ ಶಿಕ್ಷಣವನ್ನ ನೀಡಲು ಬಯಸುತ್ತೇನೆ. ಭ್ರಷ್ಟ ಪಕ್ಷದಲ್ಲಿ ವಿದ್ಯಾವಂತರಿಲ್ಲ. ಆದರೆ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಪಕ್ಷದಲ್ಲಿ, ಉತ್ತಮ ಶಿಕ್ಷಣ ಮತ್ತು ನಿಜವಾದ ಐಐಟಿ ಪದವೀಧರರು ಇದ್ದಾರೆ” ಎಂದು ಕೇಜ್ರಿವಾಲ್ ಹೇಳಿದರು.
ಎಎಪಿಯ 62 ಶಾಸಕರ ಪೈಕಿ 58 ಮಂದಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಪರವಾಗಿ ಮತ ಚಲಾಯಿಸಿದರು. ಮೂವರು ಗೈರುಹಾಜರಾಗಿದ್ದರು. ಅವರಲ್ಲಿ ಇಬ್ಬರು ವಿದೇಶದಲ್ಲಿದ್ದಾರೆ. ಮತ್ತೊಬ್ಬ ನಾಯಕ ಸತ್ಯೇಂದ್ರ ಜೈನ್ ಜೈಲಿನಲ್ಲಿದ್ದಾರೆ. ಮತ್ತಬ್ಬರು ಸ್ಪೀಕರ್.
ಅಂದ್ಹಾಗೆ, ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (AAP) ನಾಯಕ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಿವಾಸ ಮತ್ತು ಬ್ಯಾಂಕ್ ಲಾಕರ್ಗಳ ಮೇಲೆ ಕೇಂದ್ರೀಯ ತನಿಖಾ ದಳ (CBI) ಶುಕ್ರವಾರ ದಾಳಿ ನಡೆಸಿತ್ತು. ಇನ್ನು ಈ ಘಟನೆಯು ದೇಶಾದ್ಯಂತ ಒಂದು ಸಂವೇದನೆಯಾಗಿ ಮಾರ್ಪಟ್ಟಿದೆ.