ಚಾಮರಾಜನಗರ: ಚುನಾವಣೆಯಲ್ಲಿ ( Election ) ಗೆದ್ದ ನಂತ್ರ, ನೆರೆಯ ಸಂಬಂಧ ಇದೇ ಮೊದಲ ಬಾರಿಗೆ ಚಾಮರಾಜನಗರದ ಬೂದಿತಿಟ್ಟು ಹಾಗೂ ಕೆಸ್ತೂರಿಗೆ ಭೇಟಿ ನೀಡಿದಂತ ಶಾಸಕ ಎನ್ ಮಹೇಶ್ ( MLA N Mahesh ) ಅವರನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರು ಪೊಲೀಸರ ಮನವೊಲಿಕೆಗೂ ಬಗ್ಗದೇ ತರಾಟೆಗೆ ತೆಗೆದುಕೊಂಡ ಪರಿಣಾಮ, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಸ್ಥಳದಿಂದ ಕಾಲ್ಕಿತ್ತ ಘಟನೆ ಇಂದು ನಡೆಯಿತು.
ಭಾರೀ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಬೂದಿತಿಟ್ಟು ಹಾಗೂ ಕೆಸ್ತೂರು ಗ್ರಾಮಗಳಲ್ಲಿ ನೆರೆ ಉಂಟಾಗಿತ್ತು. ಹೀಗಾಗಿ ಇಂದು ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಅವರು ಜಮೀನಿಗೆ ನೀರು ನುಗ್ಗಿ, ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದಂತ ಗ್ರಾಮಗಳಿಗೆ ಇಂದು ಭೇಟಿ ನೀಡಿದರು.
ಚುನಾವಣೆಯಲ್ಲಿ ಗೆದ್ದ ನಂತ್ರ ಮೊದಲ ಬಾರಿಗೆ ಗ್ರಾಮಕ್ಕೆ ಭೇಟಿ ನೀಡಿದಂತ ಶಾಸಕರನ್ನು ಕಂಡಂತ ಗ್ರಾಮಸ್ಥರು, ನೀವು ಗೆದ್ದ ಮೇಲೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಳೆದ 5 ವರ್ಷದಿಂದ ನೀವು ಏನೂ ಅಭಿವೃದ್ಧಿ ಮಾಡಿಲ್ಲ. ಮದ್ದೂರಿಗೆ ತೆರಳುವ ರಸ್ತೆ ಸಹ ದುರಸ್ತಿ ಮಾಡಿಲ್ಲ ಎಂಬುದಾಗಿ ತರಾಟೆಗೆ ತೆಗೆದುಕೊಂಡರು.
ಗ್ರಾಮಸ್ಥರು ಏರು ಧ್ವನಿಯಲ್ಲಿ ಶಾಸಕ ಎನ್ ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಕಾರಣ, ಮಧ್ಯ ಪ್ರವೇಶಿಸಿದಂತ ಪೊಲೀಸರು, ಗ್ರಾಮಸ್ಥರನ್ನು ಮನವೊಲಿಸೋ ಪ್ರಯತ್ನ ನಡೆಸಿದ್ರು. ಆದ್ರೇ ಪೊಲೀಸರು ಎಷ್ಟೇ ಮನವೊಲಿಸೋದಕ್ಕೆ ಯತ್ನಿಸಿದ್ರೂ ಗ್ರಾಮಸ್ಥರು ಸುಮ್ಮನಾಗಲಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ ಶಾಸಕ ಎನ್ ಮಹೇಶ್, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಅಲ್ಲಿಂದ ಕಾಲ್ಕಿತ್ತರು.