ತುಮಕೂರು: ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ನೂರು ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ 5 ರಿಂದ 10 ಲಕ್ಷ ರೂ ಧನಸಹಾಯ ನೀಡಿ ಉದ್ಯೋಗ ಸೃಷ್ಟಿ ಮಾಡುವ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ರಾಜ್ಯ ಮಟ್ಟದ ಭೋವಿ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, 21ನೇ ಶತಮಾನ ಜ್ಞಾನದ ಶತಮಾನ. ನಿಮ್ಮ ಜ್ಞಾನವೇ ತಂತ್ರಾಂಶ ಜ್ಞಾನವಿದೆ. ಶಿಕ್ಷಣಕ್ಕೆ ಮಹತ್ವ ನೀಡಬೇಕು. ಸಮಾಜದ ಶೈಕ್ಷಣಿಕ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಎಸ್ ಸಿ ಎಸ್ ಟಿ ಜನಾಂಗಕ್ಕೆ 1000 ವಿದ್ಯಾರ್ಥಿಗಳಿಗೆ 100 ಹಾಸ್ಟೆಲ್ ಗಳನ್ನು ಬೆಂಗಳೂರು ,ಮೈಸೂರು ಹು-ಧಾರವಾಡ,ಗುಲ್ಬರ್ಗಾ, ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ. ಎಸ್ ಸಿ ಎಸ್ ಟಿ ವಿದ್ಯಾರ್ಥಿ ವೇತನ, ಉನ್ನತ ಶಿಕ್ಷಣಕ್ಕೆ ಸಹಾಯ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಎಸ್ ಸಿ ಎಸ್ ಟಿ ಜನಾಂಗಕ್ಕೆ 75 ಯೂನಿಟ್ ಉಚಿತ ವಿದ್ಯುತ್ ನೀಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಭೂ ಒಡೆತನಕ್ಕೆ 15 ಲಕ್ಷ ರೂ., ಮನೆ ನಿರ್ಮಾಣಕ್ಕೆ 2 ಲಕ್ಷ ನೀಡಲಾಗುತ್ತಿದೆ. ಭೋವಿ ಅಭಿವೃದ್ಧಿ ನಿಗಮಕ್ಕೆ175 ಕೋಟಿ ಯೋಜನೆಯನ್ನು ರೂಪಿಸಿ ಪ್ರಾರಂಭಿಸಲು ಸೂಚಿಸಲಾಗಿದೆ ಎಂದರು.
ಭೋವಿ ಅಭಿವೃದ್ಧಿ ನಿಗಮಕ್ಕೆ ಶೀಘ್ರದಲ್ಲಿಅಧ್ಯಕ್ಷರ ನೇಮಕ
ಭೋವಿ ಅಭಿವೃದ್ಧಿ ನಿಗಮಕ್ಕೆ ದಕ್ಷ ಅಧ್ಯಕ್ಷರನ್ನು ಸಧ್ಯದಲ್ಲಿಯೇ ನೇಮಿಸಲಾಗುವುದು. ಸ್ತ್ರೀಸಾಮರ್ಥ್ಯ ಯೋಜನೆಯಡಿ ಎಸ್ ಸಿ ಎಸ್ ಟಿ ಸ್ತ್ರೀ ಶಕ್ತಿ ಸಂಘಕ್ಕೆ 10 ಲಕ್ಷ ವರೆಗೂ ಬ್ಯಾಂಕ್ ಸಾಲ ಸೌಲಭ್ಯ, ರಾಜ್ಯ ಸರ್ಕಾರದಿಂದ ಧನಸಹಾಯ ನೀಡಲಾಗುತ್ತಿದೆ. ಭೋವಿ ಸಮಾಜದ ಗುರುಗಳ ಮಾರ್ಗದರ್ಶನದಲ್ಲಿ ಸಮುದಾಯ ಅಭಿವೃದ್ಧಿಯನ್ನು ಕಾಣಲಿದೆ. ಸಾಮಾಜಿಕ ನ್ಯಾಯ ಭಾಷಣದ ಸರಕಲ್ಲ. ಸಮಾಜದವರು ಜಾಗೃತರಾಗಬೇಕು.ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಣ, ಉದ್ಯೋಗ, ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದೆ. ದುರ್ಬಲ ವರ್ಗದವರ ಶಿಕ್ಷಣ , ಉದ್ಯೋಗ ನೀಡಿ, ಸ್ವಾಭಿಮಾನದ ಬದುಕು ನಡೆಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಸಾಮಾಜಿಕ ಪರಿವರ್ತನೆಗಾಗಿ ಸರ್ಕಾರದ ಸಾಮಾಜಿಕ ತಂತ್ರಗಾರಿಕೆ
ಭೂತಾನಿನ ರಾಜ ಜನತೆಯ ಸಂತೋಷದ ಬದುಕು ನಿಜವಾದ ಮಾನದಂಡ ಎಂದು ಹೇಳಿದ್ದಾರೆ. ವಿಶ್ವಬ್ಯಾಂಕ್ ಕೂಡ ಭೂತಾನಿನ ರಾಜರ ಮಾತಿಗೆ ಸಹಮತಿ ನೀಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕು ಸಂತೋಷವಾಗಿರಲು ಆರೋಗ್ಯ, ಶಿಕ್ಷಣ , ಉದ್ಯೋಗ ನೀಡುವ ಗುರಿಯನ್ನರಿಸಿ ಕಾರ್ಯಕ್ರಮ ರೂಪಿಸಲಾಗಿದೆ. ಸಾಮಾಜಿಕ ಪರಿವರ್ತನೆಗಾಗಿ ಸಾಮಾಜಿಕ ತಂತ್ರಗಾರಿಕೆಯನ್ನು ಸರ್ಕಾರ ಮಾಡುತ್ತಿದೆ. ಸರ್ಕಾರಕ್ಕೆ ಪ್ರಗತಿಪರ ಚಿಂತನೆಯಿದ್ದು, ಬದ್ಧತೆಯಿಂದ ಕೆಲಸ ಮಾಡಲಾಗುವುದು. ನವಭಾರತಕ್ಕೆ ನವಕರ್ನಾಟಕ ನಿರ್ಮಾಣದಲ್ಲಿ ಸಮಾಜದ ಕೊಡುಗೆ ನೀಡಲಿದೆ ಎಂದು ತಿಳಿಸಿದರು.
ಭೋವಿಕುಲದಲ್ಲಿ ಜ್ಞಾನ ಮತ್ತು ಧ್ಯಾನ ರಕ್ತಗತವಾಗಿದೆ
ಸಿದ್ಧರಾಮೇಶ್ವರರು ಬದುಕಿನ ದಾರಿಯನ್ನು ತೋರಿಸಿದ ಪವಾಡಪುರುಷರು. ಬದುಕಿನಲ್ಲಿ ದುಡಿಮೆಯಿಲ್ಲದಿದ್ದರೆ ಅದು ಬದುಕೇ ಅಲ್ಲ. ಬೆವರು ಹರಿಸಿ ದುಡಿದರೆ ದೇವರಿಗೆ ಮೆಚ್ಚುಗೆಯಾಗುತ್ತದೆ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ತಿಳಿಸಿದ್ದಾರೆ. ಪೂಜೆಗಿಂತ ಶ್ರೇಷ್ಟವಾದುದು ಕಾಯಕ. ಕಾಯಕಯೋಗಿಗಳಿಂದ ರಾಷ್ಟ್ರನಿರ್ಮಾಣವಾಗುತ್ತಿದೆ. ತಳಹಂತದ ಶ್ರಮಜೀವಿಗಳು ದೇಶದಲ್ಲಿ ಬದಲಾವಣೆ ತರುತ್ತಿದ್ದಾರೆ. ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲವಿದು. ಕಲ್ಲಿನಿಂದ ಡ್ಯಾಂಗಳು, ಕಟ್ಟಡಗಳು, ದೇವರು ಹಾಗೂ ದೇವಸ್ಥಾನಗಳು ನಿರ್ಮಾಣವಾಗುತ್ತವೆ. ನೆಲದ ಮೇಲಿನ ಕಲ್ಲು ಭಗವಂತನ ಸ್ವರೂಪವಾಗಲು ಪರಿವರ್ತನೆಯಾಗುತ್ತದೆ. ಕಲ್ಲನ್ನು ಮೇಣದಂತೆ ಕಡಿದು ರೂಪಗೊಳಿಸುವ ಕಲೆ ಭೋವಿ ಸಮಾಜಕ್ಕೆ ಕರಗತವಾಗಿದೆ. ರಸ್ತೆಯ ಮೇಲಿನ ಕಲ್ಲನ್ನು ಲಯಬದ್ಧವಾಗಿ ಕಡಿಯುವ ಮೂಲಕ, ಶ್ರದ್ಧೆ , ಭಕ್ತಿ, ಕಾಯಕ,ದಕ್ಷತೆಯಿಂದ ಕಡಿಯುವ ಕೆಲಸ ಮಾಡಿದಾಗ ದೈವಸ್ವರೂಪವಾಗುತ್ತದೆ. ಜ್ಞಾನ ಮತ್ತು ಧ್ಯಾನ ಭೋವಿಕುಲದಲ್ಲಿ ರಕ್ತಗತವಾಗಿದೆ. ಸಿದ್ಧರಾಮೇಶ್ವರರು ಕೆರೆಕಟ್ಟೆಗಳ ನಿರ್ಮಾಣ, ದೇವಸ್ಥಾನಗಳ ನಿರ್ಮಾಣ ಮಾಡಿರುವ ಕಾಯಕ ಶ್ರೇಷ್ಟವಾದವು. ಮಾರ್ಮಿಕವಾದ ವಚನಗಳು ಅವರು ರಚಿಸಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಪ್ರಸಾದ್ ಅವರು, ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಸಮಸ್ಯೆಗಳಿಗೆ ಪರಿಹಾರದ ಭಾಗವಾಗಿದ್ದಾರೆ. ಭೋವಿ ಸಮಾಜದ ಎಲ್ಲರಿಗೂ ಇವರು ಪ್ರೇರಣೆಯಾಗಿದ್ದಾರೆ ಎಂದು ಪ್ರಶಂಸಿಸಿದರು.