ಬೆಂಗಳೂರು: 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ( Congress Party ) ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಅಧಿಕಾರ ಅನುಭವಿಸಿದ ಗುಲಾಂ ನಬಿ ಅಜಾದ್ ( Gulam nabi Azad ) ಅವರು ಪಕ್ಷಕ್ಕೆ ಶಕ್ತಿ ತುಂಬುವ ಕಾಲದಲ್ಲಿ ಉಪಕಾರ ಸ್ಮರಣೆ ಮರೆತಿರುವುದು ಖಂಡನೀಯ. ದೇಶ ಕಷ್ಟ ಕಾಲದಲ್ಲಿರುವಾಗ, ದೇಶವನ್ನು ಒಂದುಗೂಡಿಸಿ ದೇಶದಲ್ಲಿ ಐಕ್ಯತೆ, ಸಮಗ್ರತೆ, ಶಾಂತಿ ತರಲು ನಾವೆಲ್ಲ ಹೋರಾಟ ಮಾಡುವಾಗ ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಆ ಮೂಲಕ ಎತ್ತ ತಾಯಿಗೆ ದ್ರೋಹ ಬಗೆದಿದ್ದಾರೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar ) ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ 600 ಜನ ನಾಯಕರು ಚರ್ಚೆ ಮಾಡಿ ಭಾರತವನ್ನು ಯಾವ ರೀತಿ ಉಳಿಸಬೇಕು, ಮುಂದೆ ತೆಗೆದುಕೊಂಡು ಹೋಗಬೇಕು ಎಂದು ತೀರ್ಮಾನಿಸಲಾಗಿತ್ತು. ಆ ಸಭೆಯಲ್ಲಿ ಗುಲಾಂ ನಬಿ ಅಜಾದ್ ಅವರ ಪಾತ್ರವೂ ಪ್ರಮುಖವಾಗಿತ್ತು. ಆದರೆ ಅವರು ಇಂದು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿರುವ ಅಜಾದ್ ಅವರು ಐದು ಪುಟಗಳ ಪತ್ರ ಬರೆದಿದ್ದು, ಅದರಲ್ಲಿ ಅನೇಕ ವಿಚಾರ ಪ್ರಸ್ತಾಪಿಸಿದ್ದಾರೆ.
ಅವರು 1977ರಿಂದ ಇಲ್ಲಿಯವರೆಗೂ 50 ವರ್ಷಗಳಲ್ಲಿ ಅವರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕಾರಣ ಆರಂಭಿಸಿದ್ದು, ಎಲ್ಲ ಪ್ರಮುಖ ವಿಭಾಗದಲ್ಲಿ ಕೆಲಸ ಮಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜತೆಗೆ 20 ವರ್ಷಗಳ ಕಾಲ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ರಾಜ್ಯ ಸಭೆ ಹಾಗೂ ಲೋಕಸಭೆ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದಾರೆ. ಇಷ್ಟಾದರೂ ಇಂದು ರಾಜೀನಾಮೆ ತೀರ್ಮಾನ ಮಾಡಿದ್ದಾರೆ. ಅವರಿಗೆ ಏನೆಂದು ಹೇಳಬೇಕೋ ಮಾಧ್ಯಮದವರೇ ವಿಶ್ಲೇಷಿಸಬೇಕು ಎಂದರು.
ಅವರು ತಮ್ಮ ಪತ್ರದಲ್ಲಿ ಹೇಳಿರುವ ಹಲವು ವಿಚಾರಗಳನ್ನು ಬೂತ್ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಜಾರಿಗೊಳಿಸಲು ಪಕ್ಷದಲ್ಲಿ ಅವರಿಗೆ ಅವಕಾಶವಿತ್ತು. ಕಾಂಗ್ರೆಸ್ ಪಕ್ಷ ಅವರ 50 ವರ್ಷಗಳ ರಾಜಕೀಯ ಜೀವನದಲ್ಲಿ 40ಕ್ಕೂ ಹೆಚ್ಚು ವರ್ಷಗಳ ಕಾಲ ಅಧಿಕಾರ ನೀಡಿದೆ. ಅವರಿಗೆ ಇಷ್ಟು ಅಧಿಕಾರ ಕೊಟ್ಟಿದ್ದು ಕಾಂಗ್ರೆಸ್ ಪಕ್ಷವೋ, ಬೇರೆ ಪಕ್ಷವೋ? ಅವರಿಗೆ ರಾಜಕೀಯದಲ್ಲಿ ಇಷ್ಟು ದೊಡ್ಡ ಹೆಸರು ಬರಬೇಕಾದರೆ ಅದು ಕಾಂಗ್ರೆಸ್ ಪಕ್ಷ, ನೆಹರೂ, ಗಾಂಧಿ ಕುಟುಂಬ ಕಾರಣ ಎಂದು ಹೇಳಿದರು.
ಅಜಾದ್ ಅವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಕಾಲದಲ್ಲಿ ಅಧಿಕಾರ ಅನುಭವಿಸಿದರು. ನಂತರ ನರಸಿಂಹ ರಾವ್ ಅವರ ಸರ್ಕಾರ ಹಾಗೂ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅವರಿಗೆ ಅಧಿಕಾರ ನೀಡಿತ್ತು. ನಂತರ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದಾಗಲೂ ಅವರಿಗೆ 7 ವರ್ಷಗಳ ಕಾಲ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನದ ಅಧಿಕಾರ ನೀಡಿತ್ತು. ಪಕ್ಷದಲ್ಲಿ ಯಾರಿಗೂ ಅಧಿಕಾರ ಇಲ್ಲದಿದ್ದಾಗಲೂ ಅವರು ಸಾಂವಿಧಾನಿಕ ಹುದ್ದೆ ಅಲಂಕರಿಸಿದ್ದರು. ಇಷ್ಟೇಲ್ಲಾ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ಪಕ್ಷ ಸರಿ ಇಲ್ಲ, ರಾಹುಲ್ ಗಾಂಧಿ ತೀರ್ಮಾನ ಸರಿ ಇಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ರಾಜೀನಾಮೆ ಕೊಟ್ಟಾಗಲೇ ಅಜಾದ್ ಅವರು ಯಾಕೆ ಪ್ರಶ್ನಿಸಲಿಲ್ಲ? ಅದನ್ನು ತಡೆಯಲಿಲ್ಲ? ಇವಾಗ ಯಾಕೆ ಮಾತನಾಡುತ್ತಿದ್ದಾರೆ? ನಿಮಗೆ ಹಿಂದೆಯೇ ಅಸಮಾಧಾನ ಇದ್ದಿದ್ದರೆ ಆಗಲೇ ಪಕ್ಷ ಬಿಟ್ಟು ಹೋಗಬೇಕಿತ್ತಲ್ಲವೇ? ಇಲ್ಲಿಯವರೆಗೂ ಯಾಕೆ ಸುಮ್ಮನಿದ್ದಿರಿ? ಎಂದು ಪ್ರಶ್ನಿಸಿದರು.
2013ರಿಂದ ಪಕ್ಷದ ಪ್ರತಿ ನಿರ್ಧಾರದಲ್ಲೂ ನಿಮ್ಮ ಅಭಿಪ್ರಾಯ ಇತ್ತು. ನಿಮಗೆ ಸಿಗಬೇಕಾದ ಎಲ್ಲ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ನೀಡಿತ್ತು. ಇದರ ಹೊರತಾಗಿ ನಿಮಗೆ ಯಾವ ಹುದ್ದೆ ಬಾಕಿ ಇತ್ತು. ದಯವಿಟ್ಟು ಹೇಳಿ. ನೀವು ಯುವಕರ ಬಗ್ಗೆ ಮಾತನಾಡುತ್ತೀರಿ. 50 ವರ್ಷಗಳ ಹಿಂದೆ ಯುವ ಕಾಂಗ್ರೆಸ್ ಸಂಘಟಿಸಿದ್ದಿರಿ. ಬಹಳ ಸಂತೋಷ. ಈಗಿನ ಯುವಕರ ಆಲೋಚನೆ ಬದಲಾಗುತ್ತಿದೆ. ಕಾಲ ಬದಲಾಗಿದೆ. ಜಗತ್ತು ಬದಲಾಗಿದೆ. ತಂತ್ರಜ್ಞಾನ ಕಾಲಘಟ್ಟದಲ್ಲಿ ಇಂದಿನ ಯುವ ಪೀಳಿಗೆ ಇದೆ. ಇಂತಹ ಸಮಯದಲ್ಲಿ ತಮ್ಮ ಅನುಭವ ಹಂಚಿಕೊಂಡು ಭಾರತ ಉಳಿಸಬೇಕಾದವರು ಈ ರೀತಿ ಮಾಡುತ್ತಿರುವುದು ನಿಮ್ಮ ಹಿರಿತನಕ್ಕೆ ಗೌರವ ತರುವುದಿಲ್ಲ ಎಂದು ವಾಗ್ಧಾಳಿ ನಡೆಸಿದರು.
Good News : ವಿವಿಗಳಲ್ಲಿ ‘ಪ್ರಾಕ್ಟೀಸ್ ಪ್ರೊಫೆಸರ್’ ನೇಮಕಕ್ಕೆ ‘UGC’ ಗ್ರೀನ್ ಸಿಗ್ನಲ್ ; ನೂತನ ಮಾರ್ಗಸೂಚಿ ಪ್ರಕಟ
ಭಾರತ್ ಜೋಡೋ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದವರು ನಮ್ಮಂತಹ ನಾಯಕರಿಗೆ ಮಾದರಿಯಾಗಿ ಇರಬೇಕಾಗಿತ್ತು, ಮಾರ್ಗದರ್ಶನ ನೀಡಬೇಕಾಗಿತ್ತು. ನಿಮಗೆ ಅಸಮಾಧಾನ ಇದ್ದರೆ ಅದನ್ನು ಚರ್ಚೆ ಮಾಡಬಹುದಿತ್ತು. ಆದರೆ ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದಾಗಿ ವಿದೇಶಕ್ಕೆ ಹೋಗಿರುವಾಗ ಈ ನಿರ್ಧಾರಕ್ಕೆ ಬಂದಿರುವುದು ಖಂಡನೀಯ ಎಂದರು.
ಅಜಾದ್ ಅವರೇ ನಿಮ್ಮಂತಹವರು, ನಮ್ಮಂತಹವರು ಕಾಂಗ್ರೆಸ್ ಪಕ್ಷ ಮುಳುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಿಮ್ಮ ಹಾಗೂ ನಮ್ಮಂತಹ ಸಾವಿರಾರು ನಾಯಕರನ್ನು ಹುಟ್ಟು ಹಾಕಿದೆ. ಹಲವರು ಬರುತ್ತಾರೆ, ಹೋಗುತ್ತಾರೆ. ಯಾರೂ ಪಕ್ಷ ಮುಳುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಇರುವವರೆಗೂ ದೇಶ ಒಗ್ಗಟ್ಟಾಗಿರುತ್ತದೆ. ಗಾಂಧಿ ಕುಟುಂಬ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲು ಸಾಧ್ಯವಿಲ್ಲ. ನಾವೆಲ್ಲರೂ ಪಕ್ಷದ ಸಣ್ಣ ಕೆಲಸಗಾರರು. ನಾವೆಲ್ಲರೂ ನಮ್ಮ ಸ್ಥಾನ ಅರಿತುಕೊಳ್ಳಬೇಕಿದೆ. ನಾವು ನಮ್ಮ ಸ್ವಾರ್ಥ ಬಿಟ್ಟು, ದೇಶ ಕಷ್ಟ ಕಾಲದಲ್ಲಿ ಇರುವಾಗ ಯುವಕರಿಗೆ ಮಾರ್ಗದರ್ಶನ ನೀಡಬೇಕು. ಸಂಕಲ್ಪ ಶಿಬಿರದಲ್ಲಿ ಸೋನಿಯಾ ಗಾಂಧಿ ಅವರು ಪಕ್ಷ ನಿಮಗೆ ಎಲ್ಲ ಅಧಿಕಾರ ನೀಡಿದ್ದು, ಈಗ ನೀವು ಕಾಂಗ್ರೆಸ್ ಪಕ್ಷಕ್ಕೆ ಋಣ ತೀರಿಸಬೇಕು ಎಂದು ಹೇಳಿದ್ದರು. ಇಂತಹ ಸಮಯದಲ್ಲಿ ಈ ರೀತಿ ನಡೆದಿರುವುದು ದುರಾದೃಷ್ಟ. ನೀವು ಎಲ್ಲರಿಗೂ ಮಾದರಿಯಾಗಬಹುದಾಗಿತ್ತು. ಆದರೆ ನಿಮ್ಮ ಈ ನಡವಳಿಕೆಯಿಂದ ಕೆಟ್ಟ ಉದಾಹರಣೆಯಾಗಿ ಉಳಿಯಲಿದ್ದೀರಿ. ಕಾಂಗ್ರೆಸ್ ಪಕ್ಷದ ಹೊರತಾಗಿ ಎಲ್ಲ ದೊಡ್ಡ ನಾಯಕರು ಶೂನ್ಯವೇ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಏಳು ಬೀಳು ಸಹಜ. ಇಂತಹ ಅನೇಕ ಸ್ಥಿತಿಯನ್ನು ಪಕ್ಷ ಕಂಡಿದೆ. ಇಂತಹ ದುರ್ಘಟನೆ ನಡೆದರೂ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿ ಬೆಳೆಯಲಿದೆ. ಯುವಕರು ಮುಂದೆ ಬಂದು ದೇಶದಲ್ಲಿ ಐಕ್ಯತೆ ಪ್ರದರ್ಶಿಸುತ್ತಾರೆ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ ಎಂದರು.
ಅಜಾದ್ ಅವರ ತೀರ್ಮಾನದಿಂದ ಕೆ ಎಚ್ ಮುನಿಯಪ್ಪ, ವೀರಪ್ಪ ಮೋಯ್ಲಿ ಸೇರಿದಂತೆ ಬೇರೆ ನಾಯಕರು ಪ್ರಭಾವಿತರಾಗುವರೇ ಎಂಬ ಪ್ರಶ್ನೆಗೆ, ‘ಯಾವುದೇ ರಾಜ್ಯ ನಾಯಕರು ಈ ರೀತಿ ಮಾಡುವುದಿಲ್ಲ. ಒಂದು ವೇಳೆ ಮಾಡಿದರೆ, ಕಾಂಗ್ರೆಸ್ ಪಕ್ಷದ ಹೊರತಾಗಿ ಅವರು ಶೂನ್ಯವಾಗುತ್ತಾರೆ. ಮುನಿಯಪ್ಪ, ಮೋಯ್ಲಿ ಅವರ ಹಿರಿತನವನ್ನು ಕಾಂಗ್ರೆಸ್ ಪಕ್ಷ ಗೌರವಿಸಲಿದೆ ಎಂದು ಅವರಿಗೆ ಅರಿವಿದೆ. ಅವರು ಸಾಕಷ್ಟು ಸಲಹೆ ನೀಡಿದ್ದಾರೆ. ಏನೇ ಭಿನ್ನಾಭಿಪ್ರಾಯ ಇದ್ದರೂ ಇಂತಹ ತೀರ್ಮಾನ ಕೈಗೊಳ್ಳುವುದಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ದುಷ್ಪರಿಣಾಮ ಬೀರುವುದಿಲ್ಲ. ಬದಲಿಗೆ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದೆ’ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆ ಪ್ರಶ್ನಿಸಿದ್ದಾರೆ ಎಂಬ ವಿಚಾರ ಕೇಳಿದಾಗ, ‘ಅವರು ನಾಯಕತ್ವ ಎಲ್ಲಿ ತೆಗೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಆಗುವ ಅವಕಾಶವನ್ನೇ ಅವರು ಕೈಬಿಟ್ಟರು. ನಾವೆಲ್ಲರೂ ಒತ್ತಾಯಿಸಿದರೂ ಅವರು ಉಪಪ್ರಧಾನಿ ಹಾಗೂ ಮಂತ್ರಿ ಸ್ಥಾನ ವಹಿಸಲಿಲ್ಲ. ಪಕ್ಷ ಅವರ ನೇತೃತ್ವದಲ್ಲಿ ಸೋತಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ನಾವೆಲ್ಲರೂ ಎಷ್ಟೇ ಬೇಡಿಕೊಂಡರೂ ಅವರು ಒಪ್ಪಲಿಲ್ಲ. ಹೀಗಾಗಿ ಸೋನಿಯಾ ಗಾಂಧಿ ಅವರಿಗೆ ಅಧ್ಯಕ್ಷರಾಗುವಂತೆ ಮನವಿ ಮಾಡಿಕೊಂಡೆವು. ಇಂದಿಗೂ ಅವರು ಪಕ್ಷದ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದಾರೆ. ದೇಶದ 3500 ಕಿ.ಮೀ ದೂರ ಪಾದಯಾತ್ರೆ ಮಾಡಿ ದೇಶ ಒಗ್ಗೂಡಿಸಲು ಬಯಸುತ್ತಿದ್ದಾರೆ. ಇದಕ್ಕಾಗಿ ಭಾರತ ಜೋಡೋ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದು ಉತ್ತರಿಸಿದರು.
ಗಾಂಧಿ ಕುಟುಂಬ ಹೊರತಾಗಿ ಬೇರೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು, ಅದರಲ್ಲಿ ಖರ್ಗೆ ಅವರ ಹೆಸರು ಇದೆಯಂತೆ ಎಂಬ ಪ್ರಶ್ನೆಗೆ, ‘ಗಾಂಧಿ ಕುಟುಂಬ ಹೊರತಾಗಿ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರುವುದಿಲ್ಲ.ಇದನ್ನು ನಾವು ಈ ಹಿಂದೆಯೂ ನೋಡಿದ್ದೇವೆ. ಗಾಂಧಿ ಕುಟುಂಬ ಪಕ್ಷದ ಜವಾಬ್ದಾರಿ ಹೊತ್ತುಕೊಳ್ಳಲಿದೆ ಎಂಬ ನಮ್ಮ ಭರವಸೆ ಹುಸಿ ಮಾಡುವುದಿಲ್ಲ ಎಂದು ಭಾವಿಸಿದ್ದೇವೆ. ನಾವೆಲ್ಲರೂ ಅವರ ಬೆನ್ನಿಗೆ ನಿಲ್ಲುತ್ತೇವೆ’ ಎಂದರು.