ಬೆಂಗಳೂರು: ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಬಿಗಿ ಭದ್ರತೆ ನಡುವೆ ಪಾರದರ್ಶಕವಾಗಿ ನಡೆಸಲಾಗಿದ್ದು, ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆಗಿದೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. ಆದರೆ ಉತ್ತರಪತ್ರಿಕೆಯಲ್ಲಿ ಪರೀಕ್ಷಾ ನಿಯಮಗಳನ್ನು ಮೀರಿರುವ 63 ಅಭ್ಯರ್ಥಿಗಳ ಫಲಿತಾಂಶವನ್ನು ಶಿಕ್ಷಣ ಇಲಾಖೆಯೇ ತಡೆ ಹಿಡಿದು, ನೊಟೀಸ್ ನೀಡಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ವೆಬ್ಸೈಟ್ನಲ್ಲಿ ಅಭ್ಯರ್ಥಿಗಳು ವಿವರ ಮತ್ತು ಅವರು ಮಾಡಿರೋ ತಪ್ಪುಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ. 63 ಅಭ್ಯರ್ಥಿಗಳ ಪೈಕಿ ಇಬ್ಬರನ್ನು ಅನರ್ಹ ಮಾಡಲಾಗಿದೆ. ಈಗಾಗಲೇ ಅಭ್ಯರ್ಥಿಗಳಿಗೆ ನೊಟೀಸ್ ಜಾರಿ ಮಾಡಲಾಗಿದ್ದು, ಅವರಿಂದ ಉತ್ತರ ಬಂದ ಬಳಿಕ ಶಿಕ್ಷಣ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.