ಬೆಂಗಳೂರು : ಬಿಜೆಪಿ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೂ ಮಹತ್ತರ ಸ್ಥಾನ ನೀಡಿದ ಬೆನ್ನಲ್ಲೇ ಮಾತನಾಡಿ ” ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಅಧಿಕಾರಕ್ಕೆ ಬರಲು ಬಿಡಲ್ಲ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ” ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಮತ್ತು 11 ಸದಸ್ಯರನ್ನೊಳಗೊಂಡ ಕೇಂದ್ರ ಬಿಜೆಪಿ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೂ ಮಹತ್ತರ ಸ್ಥಾನ ನೀಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕೇಂದ್ರ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ನಾನು ಈ ಸ್ಥಾನ ನಿರೀಕ್ಷೆ ಮಾಡಿರಲಿಲ್ಲ. ಸಹಜವಾಗಿ ಆನೆ ಬಲ ಬಂದಿದೆ. ಹೇಗೆ ಬದಲಾವಣೆ ಗಾಳಿ ಬೀಸುತ್ತೆ ಅಂತ ನೀವೆಲ್ಲ ನೋಡ್ತೀರಾ.. ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ಪ್ರವಾಸ ಮಾಡುತ್ತೇನೆ, ಪಕ್ಷ ಸಂಘಟನೆ ಮಾಡುವೆ.ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರುವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಆ ಮೂಲಕ ಯಡಿಯೂರಪ್ಪ ಅವರನ್ನ ಕಡೆಗಣಿಸಿಲ್ಲ ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ಜಂಟಿ ಸುದ್ದಿಗೋಷ್ಠಿ ನಡೆಸಿ ಸಂತಸ ಹಂಚಿಕೊಂಡರು. ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದರು.
ಹೈಕಮಾಂಡ್ ಎಲ್ಲ ಸ್ಥಾನಮಾನ ಕೊಟ್ಟಿದೆ. ನನಗೆ ಯಾವುದೇ ಕೊರತೆ ಮಾಡಿಲ್ಲ. ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಈ ಸ್ಥಾನ ಮಾನ ಕೊಟ್ಟಿದ್ದಾರೆ. ಪಕ್ಷ ಬೆಳೆಸುವ ಶಕ್ತಿ ಕೊಟ್ಟಿದ್ದಾರೆ. ಕೈಕಾಲು ಗಟ್ಟಿ ಇರುವವರೆಗೆ ಪಕ್ಷ ಸಂಘಟನೆ ಮಾಡುತ್ತೇನೆ. ಬಸವರಾಜ ಬೊಮ್ಮಾಯಿ ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ನೀರಾವರಿ ಇಲಾಖೆ ಕೂಡ ಉತ್ತಮ ಕೆಲಸ ಮಾಡುತ್ತಿದೆ. ಹಾಗಾಗಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ಯಾರೋ ಸಿಎಂ ಆಗಿಯೇ ಬಿಟ್ಟೆ ಅಂತ ಭ್ರಮೆಯಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಅಧಿಕಾರಕ್ಕೆ ಬರಲು ಬಿಡಲ್ಲ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಯಡಿಯೂರಪ್ಪ ಟಾಂಗ್ ಕೊಟ್ಟರು. ಸಿದ್ದರಾಮೋತ್ಸವ ಮತ್ತು ಪಾದಯಾತ್ರೆ ಹುಮ್ಮಸ್ಸಲ್ಲಿರುವ ಕಾಂಗ್ರೆಸ್ಗೆ ರಾಜ್ಯ ಬಿಜೆಪಿ ಇದೀಗ ಪ್ರವಾಸ ಮೂಲಕ ಡಿಚ್ಚಿ ಕೊಡಲು ಸಜ್ಜಾಗುತ್ತಿದೆ.