ಕಲಬುರಗಿ : ಕಲ್ಯಾಣ ಕರ್ನಾಟಕ ಮಾತ್ರ ಒಂದು ವರ್ಷ ಒಂದು ತಿಂಗಳ ತಡವಾಗಿ ಸ್ವಾತಂತ್ರ್ಯದ ರುಚಿ ಕಂಡಿದೆ. ಹೀಗಾಗಿ ಇದೇ ಸೆಪ್ಟೆಂಬರ್ 17 ರಂದು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಿಜೃಂಭಣೆಯಿಂದ “ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ” ನಡೆಸಲು ಉದ್ದೇಶಿಸಿದೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.
ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ಮಾಡಿ, ಪರೇಡ್ ಕಮಾಂಡರ ಡಿ.ಎ.ಆರ್ ಮೀಸಲು ಪಡೆಯ ಆರ್.ಪಿ.ಐ ಹಣಮಂತ ನಾಯಕ ಮತ್ತು ಸಹಾಯಕ ಪರೇಡ್ ಕಮಾಂಡರ ಆರ್.ಎಸ್.ಐ. ದುರ್ಗಾಸಿಂಹ ನೇತೃತ್ವದ ವಿವಿಧ 11 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೆ.ಕೆ.ಆರ್.ಡಿ.ಬಿ.ಗೆ ದಾಖಲೆ ಪ್ರಮಾಣದಲ್ಲಿ 3,000 ಕೋಟಿ ರೂ. ಅನುದಾನ ನೀಡಲಾಗಿದೆ. ಇಡೀ ದೇಶ ಸ್ವಾತಂತ್ರ್ಯ ಪಡೆದರು, ಕಲ್ಯಾಣ ಕರ್ನಾಟಕ ಮಾತ್ರ ಒಂದು ವರ್ಷ ಒಂದು ತಿಂಗಳ ತಡವಾಗಿ ಸ್ವಾತಂತ್ರ್ಯದ ರುಚಿ ಕಂಡಿದೆ. ಹೀಗಾಗಿ ಇದೇ ಸೆಪ್ಟೆಂಬರ್ 17 ರಂದು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಿಜೃಂಭಣೆಯಿಂದ “ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ” ನಡೆಸಲು ಉದ್ದೇಶಿಸಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಕೈಗಾರಿಕೆಗಳು ಒಂದೇ ಕಡೆ ಇರುವಂತೆ ಕೈಗಾರಿಕೆ ಹಬ್ ಮಾಡಲು ಕಲಬುರಗಿ ವಿಮಾನ ನಿಲ್ದಾಣ ಬಳಿ 1000 ಎಕರೆ ಭೂಮಿ ಭೂಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. ರಾಜ್ಯದಲ್ಲಿ ಉದ್ಯೋಗ ಸೃಜನೆಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಇದಕ್ಕಾಗಿ ಉದ್ಯಮ ಸ್ನೇಹಿ ಕೈಗಾರಿಕಾ ನೀತಿ ಜಾರಿಗೊಳಿಸಲಾಗಿದೆ. ನೇರ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕಳೆದ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ದೇಶದಲ್ಲಿನ ಒಟ್ಟು ಪಾಲಿನಲ್ಲಿ ಶೇ.42 ರಷ್ಟು ಕರ್ನಾಟಕಕ್ಕೆ ಲಭಿಸಿದೆ ಎಂದರು.
ದಾವೋಸ್ ಆರ್ಥಿಕ ಶೃಂಗ ಫಲಪ್ರದವಾಗಿದ್ದು, ಮುಂದಿನ 3-4 ತಿಂಗಳಿನಲ್ಲಿ 1 ಲಕ್ಷ ಕೋಟಿ ರೂ. ರಾಜ್ಯದಲ್ಲಿ ಹೂಡಿಕೆಯಾಗಲಿದೆ. ಇದಲ್ಲದೆ ಬರುವ ನವೆಂಬರ್ 2 ರಿಂದ 4ರ ವರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಶ್ವ ಬಂಡವಾಳದಾರರ ಸಮಾವೇಶ ಆಯೋಜಿಸಿದ್ದು, 5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ ಹೊಂದಿದ್ದೇವೆ. ಇದಕ್ಕಾಗಿ ಜಪಾನ್, ದಕ್ಷಿಣ ಕೋರಿಯಾ ದೇಶದಲ್ಲಿ ಈಗಾಗಲೇ ರೋಡ್ ಶೋ ಮಾಡಿ ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿನ ಕೈಗಾರಿಕೆ ಸ್ನೇಹಿ ವಾತಾವರಣದ ಬಗ್ಗೆ ಪ್ರತಿಷ್ಟಿತ ಕಂಪನಿಗಳಿಗೆ ಮನವರಿಕೆ ಮಾಡಿ ಆಹ್ವಾನ ನೀಡಿದ್ದೇವೆ ಎಂದು ಸಚಿವ ಡಾ.ಮುರುಗೇಶ ನಿರಾಣಿ ತಿಳಿಸಿದರು.
BIGG NEWS : ಅಂಜನಾದ್ರಿಯ ಸಮಗ್ರ ಅಭಿವೃದ್ದಿಗೆ 120 ಕೋಟಿ ರೂ. ಬಿಡುಗಡೆ : ಸಚಿವೆ ಶಶಿಕಲಾ ಜೊಲ್ಲೆ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ, ಬಲಿದಾನ ನೀಡಿದ ಮಹಾನ್ ಪುರುಷರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿದ ಸಚಿವರು ದೇಶಭಕ್ತಿ ಹೆಚ್ಚಿಸಲು ಕರೆ ನೀಡಿದ “ಹರ್ ಘರ್ ತಿರಂಗಾ” ಅಭಿಯಾನದಡಿ ಕಳೆದ ಮೂರು ದಿನಗಳಿಂದ ಜಿಲ್ಲೆಯ ಪ್ರತಿ ಮನೆ-ಮನೆಗಳ ಮೇಲೆ, ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಪಂಚಾಯತಿ, ಅಂಗನವಾಡಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಜಿಲ್ಲೆಯ ಜನತೆ ಅತೀ ಉತ್ಸಾಹದಿಂದ ಈ ಅಭಿಯಾನದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ್ದಾರೆ. ಇದಕ್ಕಾಗಿ ಅಭಿನಂದನೆ ಸಲ್ಲಿಸುವೆ ಎಂದರು.
ಜಿಲ್ಲೆಯಲ್ಲಿ ಇತ್ತೀಚಿನ ಅತಿವೃಷ್ಠಿಯಿಂದ 1860ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು, ಈ ಪೈಕಿ 1400ಕ್ಕೂ ಹೆಚ್ಚಿನ ಫಲಾನುಭವಿಗಳಿಗೆ 10 ಸಾವಿರ ರೂ. ತಕ್ಷಣ ಪರಿಹಾರ ನೀಡಲಾಗಿದೆ. ಮಳೆಯಿಂದ ಜೀವ ಕಳೆದುಕೊಂಡ 6 ಮೃತರ ಅವಲಂಭಿತರಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿದೆ. ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶ ಬೆಳೆ ಹಾನಿ ಅಂದಾಜಿಸಿದ್ದು, ಜಂಟಿ ಸಮೀಕ್ಷೆ ಮಾಡಲಾಗುತ್ತಿದೆ. ನೆರೆ ಹಾವಳಿ ಪರಿಹಾರಕ್ಕೆ ಡಿ.ಸಿ. ಖಾತೆಯಲ್ಲಿ 41 ಕೋಟಿ ರೂ. ಹಣ ಇದೆ. ಹೀಗಾಗಿ ನೆರೆ ಹಾವಳಿ ಪರಿಹಾರಕ್ಕೆ ಅನುದಾನದ ಕೊರತೆಯಿಲ್ಲ.
ಸಾರ್ವಜನಿಕರ ಕುಂದುಕೊರತೆಗಳನ್ನು ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮಕ್ಷಮ ಆಲಿಸುವ, ವಿವಿಧ ಸೌಲಭ್ಯಗಳನ್ನು ವಿತರಿಸುವ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸುವ “ಸ್ಪಂದನ ಕಲಬುರಗಿ” ಎಂಬ ವಿನೂತನ ಕಾರ್ಯಕ್ರಮ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಜಿಲ್ಲೆಯಲ್ಲಿ ಪ್ರಾರಂಭಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಇದನ್ನು ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೂ ವಿಸ್ತರಣೆಗೆ ಸಲಹೆ ನೀಡಿದರು.
ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ಜಿ.ಐ. ಟ್ಯಾಗ್ ಹೊಂದಿರುವ ತೊಗರಿ ಬೆಳೆಯನ್ನು “ಭೀಮಾ ಪಲ್ಸ್” ಬ್ರ್ಯಾಂಡ್ ನೀಡಿ ಮಾರಾಟ ಮಾಡಲಾಗುವುದು. ಜಿಲ್ಲೆಯಲ್ಲಿ ಮೆಗಾ ಟೆಕ್ಟೈಲ್ಸ್ ಪಾರ್ಕ್ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾಗುವ ಸಂಪೂರ್ಣ ಆಶಾಭಾವನೆ ಹೊಂದಿದ್ದೇವೆ. ನಬಾರ್ಡ್ ಸಹಾಯದೊಂದಿಗೆ 15 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ನಗರಕ್ಕೆ ಹೊಂದಿಕೊಂಡಿರುವ ಜಾಫರಾಬಾದ ಬಳಿ ಹೈಟೆಕ್ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ 4 ಎಕರೆ ಜಮೀನು ರೇಷ್ಮೆ ಇಲಾಖೆಯ ಹೆಸರಿಗೆ ವರ್ಗಾಯಿಸಲಾಗಿದೆ. ರೇಷ್ಮೆ ಮಾರುಕಟ್ಟೆ ಇಲ್ಲಿ ಸ್ಥಾಪನೆಯಿಂದ ರೈತರು ದೂರದ ರಾಮನಗರಕ್ಕೆ ಹೋಗಿ ರೇಷ್ಮೆ ಮಾರಾಟ ಮಾಡುವುದು ತಪ್ಪಲಿದೆ ಎಂದು ಸಚಿವರು ಹೇಳಿದರು.
ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ಜಾರಿಗೊಳಿಸಿದ ವಿದ್ಯಾನಿಧಿ ಯೋಜನೆಯನ್ನು ಇತ್ತೀಚೆಗೆ ನೇಕಾರ, ಟ್ಯಾಕ್ಸಿ ಚಾಲಕರು ಹಾಗೂ ಮೀನುಗಾರರ ಮಕ್ಕಳಿಗೂ ವಿಸ್ತರಿಸಿದೆ. ಈ ಯೋಜನೆಯಡಿ 2021-22ನೇ ಸಾಲಿನಿಂದ ಇಲ್ಲಿಯ ವರೆಗೆ 37,998 ವಿದ್ಯಾರ್ಥಿಗಳಿಗೆ 13.73 ಕೋಟಿ ರೂ. ವಿದ್ಯಾರ್ಥಿ ವೇತನ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಆಳಂದ ತಾಲೂಕಿನ ಅಮರ್ಜಾ ಡ್ಯಾಂ ಬಳಿ 10 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್.ಎಸ್. ಮಾದರಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಈಗಾಗಲೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲೆಯಲ್ಲಿ 75 ಅಮೃತ ಸರೋವರ ಕೆರೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೆ 15 ಕೆರೆಗಳನ್ನು ಪೂರ್ಣಗೊಳಿಸಿದೆ. ಉಳಿದ 60 ಕೆರೆಗಳನ್ನು ಪ್ರಗತಿಯಲ್ಲಿವೆ ಎಂದು ಸಚಿವ ಡಾ.ಮುರುಗೇಶ ನಿರಾಣಿ ತಿಳಿಸಿದರು.