ಬೆಂಗಳೂರು: ಪಾದಯಾತ್ರೆಗಳು ಕಾಂಗ್ರೆಸ್ ( Congress ) ಕಾರ್ಯಕ್ರಮ. ನಾವೆಲ್ಲರೂ ಗಾಂಧೀಜಿ ( Gandhiji ) ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಅನುಯಾಯಿಗಳು. ಲಕ್ಷಾಂತರ ಕಾಂಗ್ರೆಸಿಗರು ಸೆರೆವಾಸ, ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇದನ್ನು ಯುವ ಪೀಳಿಗೆಗೆ ತಿಳಿಸಬೇಕು. ಆದರೆ ಈ ತ್ರಿವರ್ಣ ಧ್ವಜವನ್ನು ಬಿಜೆಪಿಯವರು ಅಪಶಕುನ ಎಂದು ಕರೆದಿದ್ದರು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( DK Shivakumar ) ಹೇಳಿದ್ದಾರೆ.
ಇಂದು ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, 80 ವರ್ಷಗಳ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ‘ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಎಂಬ ಸಂದೇಶದೊಂದಿಗೆ ಈ ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಿದರು. ಇಂದು ನಾವೆಲ್ಲರೂ ಗಾಂಧೀಜಿ ಅವರ ಅನುಯಾಯಿಗಳಾಗಿ, ಬಿಜೆಪಿಯವರಿಗೆ ಅಧಿಕಾರ ಬಿಟ್ಟು ತೊಲಗಿ ಎಂಬ ಸಂದೇಶ ನೀಡಬೇಕಿದೆ ಎಂದು ಹೇಳಿದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಲಾಗಿದೆ. ಆದರೆ ಇಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ರೀತಿ ಅದರ ಮುಖ್ಯಸ್ಥರಿಗೆ ಕಿರುಕುಳ ನೀಡುತ್ತಿದೆ ಎಂದು ನಾವೆಲ್ಲರೂ ನೋಡುತ್ತಿದ್ದೇವೆ. ಇದು ಅಘೋಷಿತ ತುರ್ತುಪರಿಸ್ಥಿತಿಗೆ ಸಾಕ್ಷಿ ಎಂದರು.
ನಮ್ಮ ನಾಯಕರು ನಮಗೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ, ಸಂವಿಧಾನ ತಂದುಕೊಟ್ಟಿದ್ದು, ಇದನ್ನು ಬದಲಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ, ನೆಹರೂ, ಸರ್ದಾರ್ ಪಟೇಲ್, ಅಜಾದ್ ಸೇರಿದಂತೆ ಹಲವು ನಾಯಕರ ಅಹಿಂಸಾ ಚಳುವಳಿಯನ್ನು ವಿಶ್ವದ ಎಲ್ಲ ನಾಯಕರು ಮೆಚ್ಚಿದ್ದಾರೆ. ಇದು ನಮ್ಮ ಪಕ್ಷದ ಸಂಸ್ಕೃತಿ ಎಂದು ತಿಳಿಸಿದರು.
ಪಾದಯಾತ್ರೆಗಳು ಕಾಂಗ್ರೆಸ್ ಕಾರ್ಯಕ್ರಮ. ನಾವೆಲ್ಲರೂ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಅನುಯಾಯಿಗಳು. ಲಕ್ಷಾಂತರ ಕಾಂಗ್ರೆಸಿಗರು ಸೆರೆವಾಸ, ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇದನ್ನು ಯುವ ಪೀಳಿಗೆಗೆ ತಿಳಿಸಬೇಕು. ಆದರೆ ಈ ತ್ರಿವರ್ಣ ಧ್ವಜವನ್ನು ಬಿಜೆಪಿಯವರು ಅಪಶಕುನ ಎಂದು ಕರೆದಿದ್ದರು ಎಂದರು.
ಉದಯಪುರದಲ್ಲಿ ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ. ಅದರ ಭಾಗವಾಗಿ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲು ತೀರ್ಮಾನಿಸಿದೆವು. ಅನೇಕ ಜಿಲ್ಲೆಗಳಲ್ಲಿ 200 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಈ ಕಾಲಾವಧಿಯನ್ನು ಆಗಸ್ಟ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ಆ.15 ರಂದು ರಾಜ್ಯ ರಾಜಧಾನಿಗಳಲ್ಲಿ ತ್ರಿವರ್ಣ ಧ್ವಜ ಹಿಡಿದು ಪಾದಯಾತ್ರೆ ಮಾಡಲು ಸೂಚಿಸಿದರು. ಅದರ ಭಾಗವಾಗಿ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿದ್ದೇವೆ. ಅಂದು ಮಧ್ಯಾಹ್ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ಈ ಪಾದಯಾತ್ರೆ ನಡೆಯಲಿದೆ. ಸಂಚಾರಕ್ಕೆ ಅನುಕೂಲವಾಗುವಂತೆ ಈ ಮಾರ್ಗ ಆಯ್ಕೆ ಮಾಡಲಾಗಿದೆ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಕಾಂಗ್ರೆಸ್ ಕೇವಲ ನೇತೃತ್ವ ವಹಿಸಿದೆ ಎಂದರು.
ನಮ್ಮ ಶಾಸಕಾಂಗ ಪಕ್ಷದ ನಾಯಕರ ಹುಟ್ಟು ಹಬ್ಬ ಹಾಗೂ ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುವ ಅವಕಾಶ ನಮಗೆ ಸಿಕ್ಕಿದೆ. ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಎಲ್ಲರೂ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜತೆಗೂಡಿ ಪಾಲ್ಗೊಳ್ಳಬೇಕು. ಸ್ವಾತಂತ್ರ್ಯದ ನಂತರ ಇದೊಂದು ದೊಡ್ಡ ಪಾದಯಾತ್ರೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸುವುದಾಗಿ ಹೇಳಿದ್ದು, ಯಾರೂ ಭಾಗವಹಿಸಲಿದ್ದಾರೆ ಎಂದು ಶೀಘ್ರದಲ್ಲೇ ಪ್ರಕಟಿಸುತ್ತಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ನಾವು ಇರುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ ಅಮೃತಮಹೋತ್ಸವದಲ್ಲಿ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ. ಅದನ್ನು ನಾವು ಬಳಸಿಕೊಳ್ಳಬೇಕು. ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಬದುಕಿಲ್ಲ. ಮುಂದಿನ ಬಾರಿ ಸರ್ಕಾರ ಬದಲಾಗಲಿದೆ ಎಂದು ಅವರದೇ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಈ ಅಕಾಶವನ್ನು ನಾವು ಬಳಸಿಕೊಂಡು ನಮ್ಮ ನಾಯಕರ ಮಾರ್ಗದರ್ಶನದಲ್ಲಿ ನಡೆದು ಶ್ರಮಿಸಬೇಕು. ಮನೆ ಮನೆಗೂ ತಲುಪಿ ಕಾಂಗ್ರೆಸ್ ಆಚಾರ ವಿಚಾರ ಪ್ರಚಾರ ಮಾಡಬೇಕು. ನಮ್ಮ ಸರ್ಕಾರದ ಕೊಡುಗೆ ತಿಳಿಸಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಹಲವು ತಲೆಮಾರುಗಳ ಜನರಿಗೆ ಅನುಕೂಲವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಳುವವನೆ ಭೂಮಿಯ ಒಡೆಯ, ಬ್ಯಾಂಕ್ ರಾಷ್ಟ್ರೀಕರಣ, ದೊಡ್ಡ ಉದ್ದಿಮೆಗಳು, ಕೈಗಾರಿಕೆಗಳು, ಪಿಎಸ್ ಯುಗಳ ಮೂಲಕ ಉದ್ಯೋಗ ಸೃಷ್ಟಿ ಮಾಡಿ ಕಾಂಗ್ರೆಸ್ ಹಲವು ತಲೆಮಾರುಗಳಿಗೆ ನೆರವಾಗಿದ್ದಾರೆ. ಇದಕ್ಕೆ ನಾವೆಲ್ಲರೂ ಋಣ ತೀರಿಸಬೇಕು ಎಂದು ತಿಳಿಸಿದರು.
ದೇಶದಲ್ಲಿ ಬದಲಾವಣೆ ತರಬೇಕಾಗಿದ್ದು, ರಾಜ್ಯದಲ್ಲಿ ಬದಲಾವಣೆ ತರುವ ಜವಾಬ್ದಾರಿ ನಮ್ಮ ಮೇಲಿದೆ. ಆಮೂಲಕ ನಮ್ಮ ನಾಯಕರಿಗೆ ಶಕ್ತಿ ತುಂಬಬೇಕು. ಬಿಜೆಪಿಯವರು ರಾಷ್ಟ್ರಧ್ವಜವನ್ನು ಇಂದು ಮಾರಾಟಕ್ಕೆ ಇಟ್ಟಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ನಾವು 1.5 ಲಕ್ಷ ರಾಷ್ಟ್ರಧ್ವಜ, ಟೋಪಿ, ಟಿ ಶರ್ಟ್ ಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಮುಖ್ಯಮಂತ್ರಿಗಳು ಉಚಿತವಾಗಿ ನೀಡಬೇಕು. ಈ ರಾಷ್ಟ್ರಧ್ವಜ ವ್ಯಾಪಾರದ ವಸ್ತುವಲ್ಲ. ಇದು ದೇಶದ ಸ್ವಾಭಿಮಾನ, ಐಕ್ಯತೆ ಸಂಕೇತ. ಇದನ್ನು ಮಾರಾಟ ಮಾಡಿ ರಾಷ್ಟ್ರಧ್ವಜ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನೆರೆ ಸಮಯದಲ್ಲಿ ಗಈ ಕಾರ್ಯಕ್ರಮ ಮಾಡುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನೆರೆ ವಿಚಾರದಲ್ಲಿ ನಮ್ಮ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದು, ಮಂತ್ರಿಗಳು ಹೋಗಿರದ ಕಡೆಗಳಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ಚುರುಕು ಮುಟ್ಟಿಸಿ, ಜನರಿಗೆ ನೆರವಾಗುವಂತೆ ತಿಳಿಸಿದ್ದೇವೆ’ ಎಂದರು.