ಬೆಂಗಳೂರು: ನಗರದ ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುತ್ತಾರೆ. ಬಹುತೇಕ ಪ್ರಯಾಣಿಕರು ಧಾವಂತದಲ್ಲಿಯೇ ಇರುತ್ತಾರೆ. ಕೆಲವರು ಅಂತೂ ಮೆಟ್ರೋ ಇಳಿದ ತಕ್ಷಣ ಮತ್ತು ಮೆಟ್ರೋ ಗೆ ಮೇಲೆ ಹೋಗುವಾಗ ಲಿಫ್ಟ್ ಬಳಸುತ್ತಾರೆ.
ಆದರೆ ಅದು ಇರೋದು ವಿಶೇಷಚೇತನರು, ಗರ್ಭಿಣಿಯರು, ಹಿರಿಯ ನಾಗರಿಕರಿಗೆ ಅಂತ.ಈ ಕೆಟಗರಿಯ ಪ್ರಯಾಣಿಕರು ಲಿಫ್ಟ್ ತಲುಪುವ ವೇಳೆಗೆ ಲಿಫ್ಟ್ನಲ್ಲಿ ಜನ ತುಂಬಿರುತ್ತದೆ. ತಮ್ಮ ಸರದಿಗಾಗಿ ಲಿಫ್ಟ್ ಅವಶ್ಯಕತೆ ಇರುವವರು ಕಾಯಬೇಕಿರುತ್ತದೆ. ಇಂತಹ ಸಮಸ್ಯೆ ತಪ್ಪಿಸಲು ಬೆಂಗಳೂರು ಮೆಟ್ರೊ ನಿಲ್ದಾಣಗಳಲ್ಲಿ ಟೋಕನ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನ ಮೆಟ್ರೊ ನಿಲ್ದಾಣಗಳಲ್ಲಿರುವ ಲಿಫ್ಟ್ ಅನ್ನು ವಿಶೇಷಚೇತನರು, ಗರ್ಭಿಣಿಯರು ಮತ್ತು ಹಿರಿಯ ನಾಗರಿಕರು ಮಾತ್ರ ಬಳಸಬೇಕು ಎನ್ನುವ ಸೂಚನಾ ಫಲಕವನ್ನು ಅಳವಡಿಸಿದ್ದರೂ ಸಾಮಾನ್ಯ ಜನರೇ ಬಳಸುವುದನ್ನು ತಪ್ಪಿಸಲು ಪ್ರಾಯೋಗಿಕವಾಗಿ ಐದು ಮೆಟ್ರೊ ನಿಲ್ದಾಣಗಳಲ್ಲಿ ಟೋಕನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಕಬ್ಬನ್ಪಾರ್ಕ್, ವಿಧಾನಸೌಧ, ಸರ್ ಎಂ. ವಿಶ್ವೇಶ್ವರಯ್ಯ, ಕೆಎಸ್ ಆರ್ ರೈಲು ನಿಲ್ದಾಣ ಮತ್ತು ಕೆಂಪೇಗೌಡ ಮೆಟ್ರೊ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ.