ಬೆಂಗಳೂರು : ರಾಜ್ಯದಲ್ಲಿ ಆಸ್ತಿ ನೋಂದಣಿಗೆ ನೀಡಿದ ಶೇ.10ರಷ್ಟು ರಿಯಾಯಿತಿಯನ್ನ ಮುಂದಿನ ಮೂರು ತಿಂಗಳ ಕಾಲ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ಆಸ್ತಿ ನೋಂದಣಿಗೆ ನೀಡಿದ ಶೇ.10ರಷ್ಟು ರಿಯಾಯಿತಿಯನ್ನ ಮುಂದಿನ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಇನ್ನು ನೋಂದಣಿಯಲ್ಲಿ ರಿಯಾಯಿತಿ ನೀಡಿದ್ದರಿಂದ ರಾಜ್ಯದ ಬೊಕ್ಕಸಕ್ಕೆ ಹಣ ಹರಿದು ಬರುತ್ತಿದ್ದು, ನಿರೀಕ್ಷೆ ಮೀರಿ ಆದಾಯ ಸಂಗ್ರಹವಾಗಿದೆ” ಎಂದರು.
ಇನ್ನು “ಆಸ್ತಿ ನೋಂದಣಿಯ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಎದುರಾಗ್ತಿದ್ದು, ಈ ಕುರಿತು ದೂರುಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನ ಶಾಶ್ವತವಾಗಿ ಪರಿಹರಿಸಲು ತೀರ್ಮಾನಿಸಲಾಗಿದ್ದು, 406 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನ ಕಂಪ್ಯೂಟರೀಕರಣಗೊಳಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.
ಇನ್ನು “ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಐದೂವರೆ ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ಸಂಗ್ರಹವಾಗಿದೆ. ಅದ್ರಂತೆ, ಕಂದಾಯ ಇಲಾಖೆಗೆ ಈ ವರ್ಷದ ಬಜೆಟ್ʼನಲ್ಲಿ ಆಸ್ತಿ ನೋಂದಣಿಯ ಮೂಲಕ 14 ಸಾವಿರ ಕೋಟಿ ರೂ. ಸಂಗ್ರಹಿಸಲು ನಿರ್ಧರಿಸಿತ್ತು. ಆದ್ರೆ, ಈ ಪ್ರಮಾಣವನ್ನ ನಾವು ಅಧಿಕಾರಿಗಳ ಜತೆ ಚರ್ಚಿಸಿ 15 ಸಾವಿರ ಕೋಟಿ ರೂ. ಏರಿಸಿದೆವು ” ಎಂದು ಹೇಳಿದರು.