ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಹಂದಿ ಜ್ವರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ವರ್ಷದ ಆರಂಭದಿಂದ, ನೆರೆಯ ಥಾಣೆ, ಪಾಲ್ಘರ್ ಮತ್ತು ರಾಯಗಡ್ ಜಿಲ್ಲೆಗಳನ್ನು ಒಳಗೊಂಡಿರುವ ಮುಂಬೈ ವೃತ್ತದಲ್ಲಿ ಒಟ್ಟು 62 ಹಂದಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಥಾಣೆಯಲ್ಲಿ 2 ಸಾವುಗಳು ಸಂಭವಿಸಿವೆ.
ಜನವರಿ 1 ರಿಂದ ಜುಲೈ 24, 2022 ರವರೆಗೆ ಒಟ್ಟು 1,66,132 ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 62 ಎಚ್1ಎನ್1 ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸೇವೆಗಳ ಉಪ ನಿರ್ದೇಶಕಿ (ಮುಂಬೈ ವೃತ್ತ) ಡಾ.ಗೌರಿ ರಾಥೋಡ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕಳೆದ ವಾರ ಥಾಣೆಯ ಇಬ್ಬರು ರೋಗಿಗಳು ಸೋಂಕಿಗೆ ಬಲಿಯಾಗಿದ್ದಾರೆ. ಈ ವರ್ಷ ಮುಂಬೈ ವೃತ್ತದಲ್ಲಿ ಎಚ್1ಎನ್1 ವೈರಸ್ನಿಂದ ಇದು ಮೊದಲ ಸಾವುಗಳಾಗಿವೆ ಎಂದು ರಾಥೋಡ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯು ಪ್ರಸ್ತುತ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದು, ರೋಗ ಹರಡದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ. ನಾಗರಿಕರು ಮತ್ತು ವೈದ್ಯರಿಗೆ ಕಾಳಜಿ ವಹಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ ಮಹಾರಾಷ್ಟ್ರದಲ್ಲಿ ಜುಲೈವರೆಗೆ ಹಂದಿ ಜ್ವರ ಸೋಂಕಿನಿಂದ ಇದುವರೆಗೆ ಏಳು ಜನರು ಸಾವನ್ನಪ್ಪಿದ್ದಾರೆ. ವರ್ಷದ ಆರಂಭದಿಂದ ರಾಜ್ಯದ ವಿವಿಧೆಡೆ ಒಟ್ಟು 142 ಪ್ರಕರಣಗಳು ವರದಿಯಾಗಿವೆ ಎನ್ನಲಾಗುತ್ತಿದೆ.
ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಕೆಲವು ಭಾಗಗಳಲ್ಲಿ ಹಂದಿ ಜ್ವರ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಪುಣೆಯಲ್ಲಿ ಎರಡು, ಕೊಲ್ಲಾಪುರದಲ್ಲಿ ಮೂರು ಮತ್ತು ಮಹಾರಾಷ್ಟ್ರದ ಥಾಣೆ ಕಾರ್ಪೊರೇಷನ್ನಲ್ಲಿ 2 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಪುಣೆ, ಪಾಲ್ಘರ್ ಮತ್ತು ನಾಸಿಕ್ನಲ್ಲಿ ಕ್ರಮವಾಗಿ 23, 22 ಮತ್ತು 17 ಸೋಂಕು ಪ್ರಕರಣಗಳು ದಾಖಲಾಗಿವೆ.
Big news: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ʻಜನರಲ್ ನರವಾಣೆʼಯನ್ನು ಗೌರವಿಸಿದ USISPF