ಹಾವೇರಿ: ಮಕ್ಕಳ ಹಕ್ಕುಗಳ ರಕ್ಷಣೆಗೆ ಅನೇಕ ಕಾನೂನುಗಳು ಜಾರಿಯಲ್ಲಿವೆ. ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ಭಿಕ್ಷಾಟನೆ, ಅಪಾಯಕಾರಿ ಕೆಲಸಗಳಿಗೆ ತೊಡಗಿಸಿಕೊಳ್ಳುವುದು ಅಪರಾಧವಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.
ಇಜಾರಿಲಕಮಾಪೂರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ “ಸಂತ್ರಸ್ತರ ಪರಿಹಾರ ಯೋಜನೆ, ಮಕ್ಕಳ ಹಕ್ಕುಗಳು” ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಬಾಹೀರವಾಗಿದೆ. ಅದರಲ್ಲೂ ಅಪಾಯಕಾರಿ ಕೆಲಸದಲ್ಲಿ ಮಕ್ಕಳನ್ನು ನೇಮಿಸಿಕೊಳ್ಳುವಂತಿಲ್ಲ. ಈ ಕಾರಣಕ್ಕಾಗಿ ಜಗತ್ತಿನಾದ್ಯಂತ ಚರ್ಚೆ ನಡೆದು ಮಕ್ಕಳ ಹಕ್ಕುಗಳ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಯಾವುದೇ ಮಗು ಶ್ರೀಮಂತ-ಬಡವ , ಕಪ್ಪು- ಬಿಳಿಪು ಎನ್ನುವ ಕಾರಣಕ್ಕೆ ತಾರತಮ್ಯ ಮಾಡುವಹಾಗಿಲ್ಲ. ಕಾನೂನಿನ ಪ್ರಕಾರ ಎಲ್ಲರೂ ಸಮಾನರು. ಮಕ್ಕಳ ಹಕ್ಕುಗಳ ಉಲ್ಲಂಘನೆಯಾದರೆ ಮಕ್ಕಳ ಮೇಲೆ ದೌರ್ಜನ್ಯಗಳು ನಡೆದರೆ ಸರ್ಕಾರ ಮಧ್ಯಪ್ರವೇಶಿಸಿ ಮಕ್ಕಳನ್ನು ರಕ್ಷಣೆ ಮಾಡುವ ಕೆಲಸಮಾಡುತ್ತದೆ ಎಂದು ಹೇಳಿದರು.
ಭಾರತ ದೇಶದಲ್ಲಿ ಈಗಲೂ ಮೂರು ಕೋಟಿಯಷ್ಟು ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ಕಾರ್ಯವಾಗಬೇಕಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆದರೆ, ಶಾಲೆಯಿಂದ ಹೊರಗುಳಿದು ಕೆಲಸಮಾಡುತ್ತಿದ್ದರೆ, ಭಿಕ್ಷಾಟನೆಯಲ್ಲಿ ತೊಡಗಿದ್ದರೆ ಇಂತಹ ಮಕ್ಕಳರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಇಂತಹ ಸನ್ನಿವೇಶ ಕಂಡುಬಂದರೆ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕರೆ ಮಾಡಿ ಮಾಹಿತಿ ನೀಡಬೇಕು. ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಸರ್ವಾಂಗೀಣ ಅಭಿವೃದ್ಧಿ ಎಲ್ಲರ ಆದ್ಯತೆಯಾಗಿದೆ. ಮಕ್ಕಳ ಮೇಲೆ ಯಾವುದೇ ರೀತಿಯ ಅನ್ಯಾಯ ಹಾಗೂ ಅಕ್ರಮ ನಡೆಯಬಾರದು. ಇದನ್ನು ತಡೆಯುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
‘ಭಗವತಿ ಏತ ನೀರಾವರಿ ಯೋಜನೆ’ಗೆ ‘ಸಚಿವ ಸಂಪುಟ’ ಅಸ್ತು – ಸಚಿವ ಗೋವಿಂದ ಕಾರಜೋಳ
ಅಧ್ಯಕ್ಷತೆ ವಹಿಸಿದ್ದ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಹಾವೇರಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪುಟ್ಟರಾಜು ಅವರು ಮಾತನಾಡಿ, ಜೀವನಕ್ಕೆ ಬೇಕಾದ ಸಾಮಾನ್ಯ ಕಾನೂನು ಅರಿವು ಎಲ್ಲರಿಗೂ ಅಗತ್ಯವಾಗಿದೆ. ಹಾಗಾಗಿ ಶಾಲೆ-ಕಾಲೇಜು ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಕಾನೂನು ಅರಿವು ಮೂಡಿಸಲಾಗುತ್ತಿದೆ. ಜನನ ಮತ್ತು ಮರಣದ ನೋಂದಣಿ ಕಡ್ಡಾಯವಾಗಿ ದಾಖಲಿಸಬೇಕು. ಅಪರಾಧ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ 18 ವರ್ಷದೊಳಗಿನ ಮಕ್ಕಳ ಮಾಹಿತಿ ಬಹಿರಂಗಪಡಿಸುವುದು ಅಪರಾಧವಾಗಿದೆ. ಮಕ್ಕಳ ಪ್ರಕರಣಗಳ ವಿಚಾರಣೆಗೆ ಬಾಲ್ಯ ಸ್ನೇಹಿ ನ್ಯಾಯಾಲಯ ಸ್ಥಾಪಿಸಲಾಗಿದೆ. ಸಂತ್ರಸ್ತರಿಗೆ ಪ್ರತ್ಯೇಕ ಪರಿಹಾರ ವ್ಯವಸ್ಥೆ ಇದೆ ಹಾಗೂ ಮಕ್ಕಳು ಅಪರಾಧ ಮಾಡಿದ್ದರೆ ಅವರನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು ಎಂದು ಕರೆಯಲಾಗುತ್ತಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನಿಡಿದರೆ ಅಗತ್ಯ ನೆರವು ಒದಗಿಸಲಾಗುವುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಂತರಾಯ ಅವರು ಮಾತನಾಡಿ, ವಿದ್ಯಾರ್ಥಿನ ಜೀವನ ಅಮೂಲ್ಯವಾದದ್ದು, ಯಾವುದೋ ಆಕರ್ಷಣೆಗೊಳಗಾಗಿ ಅಡ್ಡದಾರಿ ಹಿಡಿದು ಭವಿಷ್ಯ ಹಾಳುಮಾಡಿಕೊಳ್ಳಬೇಡಿ. ಓದುವ ಸಮಯದಲ್ಲಿ ಸ್ಮಾರ್ಟ್ ಫೋನ್ ಅವಶ್ಯವಿಲ್ಲ. ದಯಮಾಡಿ ಸ್ಮಾರ್ಟ್ ಫೋನ್ ಬಳಸಬೇಡಿ. ಒಂದು ವೇಳೆ ಫೋನ್ ಬೇಕು ಎಂದರೆ ಕೀಪ್ಯಾಡ್ಮೊಬೈಲ್ ಬಳಸಿ ಎಂದು ಸಲಹೆನೀಡಿದರು.
ಪ್ರೊ. ಶೇಖರ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪನೆಲ್ ವಕೀಲ ಪಿ.ಎಂ.ಬೆನ್ನೂರ ಅವರು ಸಂತ್ರಸ್ತ ಪರಿಹಾರ ಯೋಜನೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್ ಅವರು ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಜಯಶ್ರೀ ಪಾಟೀಲ, ಕಾಲೇಜು ಪ್ರಾಚಾರ್ಯ ಕೃಷ್ಣಪ್ಪ ಕೆ., ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅಶೋಕ ನೀರಲಗಿ, ಕಾರ್ಯದರ್ಶಿ ಈಶ್ವರ ನಂದಿ, ಪ್ರೊ.ಮರಡಿ ಹಾಗೂ ರವಿ ಸಾದರ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿನಿಯರು ಸ್ವಾಗತಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.