ಹುಬ್ಬಳ್ಳಿ: ಉಣಕಲ್ ಕೆರೆಯ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್ನಲ್ಲಿ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಬಳಿಕ ಆತಂಕ ಕಡಿಮೆಯಾಗಿಲ್ಲ. ಸ್ಥಳದಲ್ಲಿ ಮತ್ತೆ ಮತ್ತೆ ಹೋಮ ಹವನ ನಡೆಸಲಾಗುತ್ತಿದೆ. ಇದೀಗ ಸತತ 8 ಗಂಟೆಗಳ ಕಾಲ ಪೂಜೆ ನಡೆಸಿದ್ದಾರೆ.
ನಿನ್ನೆ ಮತ್ತು ಇಂದು ಪೂಜೆ, ಹೋಮ, ಹವನ, ಯಜ್ಞವನ್ನು ಶಾಸ್ತ್ರಿಗಳು ನಡೆಸುತ್ತಿದ್ದಾರೆ. ಅಗೋರ ಹೋಮ, ಉದಕ ಶಾಂತಿ, ಸುದರ್ಶನ ಹೋಮ, ಗೋ ಪೂಜೆ, ಅಕಲಾ ಪೂಜೆ ನೆರವೇರಿಸಲಾಗುತ್ತಿದೆ. ಕೊಲೆ ನಡೆದ ಸ್ಥಳದಲ್ಲೇ ಮತ್ತೆ ಮತ್ತೆ ಪೂಜೆಗಳನ್ನು ಪ್ರೆಸಿಡೆಂಟ್ ಹೋಟೆಲ್ ಸಿಬ್ಬಂದಿ ನಡೆಸುತ್ತಿದ್ದಾರೆ.
ಸರಳ ವಾಸ್ತು ಖ್ಯಾತ ತಜ್ಞ ಮೃತಪಟ್ಟಿದ್ದನ್ನು ಅಪಶಕುನ ಎಂದು ಭಾವಿಸಿರುವ ಹೋಟೆಲ್ ಮ್ಯಾನೇಜ್ಮೆಂಟ್, ಸಿಬ್ಬಂದಿಯಲ್ಲಿ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಗ್ರಾಹಕರಲ್ಲಿನ ಅಂಜಿಕೆ ತೊಡೆದು ಹಾಕಲು ಯತ್ನಿಸುತ್ತಿದ್ದಾರೆ.
ಗುರೂಜಿ ಹತ್ಯೆಯ ನಂತರ ಹೋಟೆಲ್ ಗ್ರಾಹಕರ ಸಂಖ್ಯೆ ಗಣನೀಯ ಕುಸಿತವಾಗಿದೆ. ಹೋಟೆಲ್ನಲ್ಲಿ ಈವರೆಗೆ ಬುಕ್ ಆಗಿದ್ದ, ಮದುವೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳು ಕ್ಯಾನ್ಸಲ್ ಆಗಿವೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಹೀಗಾಗಿ ಹೋಟೆಲ್ ಮಾಲೀಕರು ಹಾಗೂ ಮ್ಯಾನೇಜ್ಮೆಂಟ್ ದೇವರ ಮೊರೆ ಹೋಗಿದ್ದಾರೆ.