ಹುಬ್ಬಳ್ಳಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಡಿ 18 ಲಕ್ಷ ಮನೆಗಳ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ತಗ್ಗು ಪ್ರದೇಶದಲ್ಲಿನ ಪ್ರವಾಹಕ್ಕೆ ಸಿಲುಕುವ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ವಿವಿಧ ಯೋಜನೆಗಳಲ್ಲಿ ಮನೆಗಳ ನಿರ್ಮಾಣ ಕೈಗೊಂಡಿದೆ. ಹಿಂದಿನ ಸರ್ಕಾರದ ತಾಂತ್ರಿಕ ತಪ್ಪಿನಿಂದ 18 ಲಕ್ಷ ಮನೆಗಳ ಮಂಜೂರಾತಿ ನಿಂತುಹೋಗಿತ್ತು. ಈಗ ಅವುಗಳನ್ನು ಸರಿಪಡಿಸಿ ಅಪ್ ಲೋಡ್ ಮಾಡಲಾಗಿದೆ. ಸರ್ಕಾರದಿಂದ ಸಮಾನ ಮೊತ್ತವನ್ನು ನೀಡಲಾಗುವುದು ಎಂದರು.
ಸಚಿವರಿಂದ ಪರಿಶೀಲನೆ
ಬಹುತೇಕ ಎಲ್ಲಾ ಸಚಿವರು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ ಎಂದರು.
ಅಕ್ರಮ ಸಿಲಿಂಡರ್ ರಿಫಿಲ್ಲಿಂಗ್
ಅಕ್ರಮ ಸಿಲಿಂಡರ್ ರಿಫಿಲ್ಲಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಈ ಬಗ್ಗೆ ದಾಳಿ ಮಾಡಿ ನಿಯಂತ್ರಣ ಮಾಡಲು ಸೂಚನೆ ನೀಡುವುದಾಗಿ ತಿಳಿಸಿದರು.
ಪರಿಹಾರ ಕ್ರಮಗಳ ಕುರಿತು ಸೂಚನೆ
ಬೀದರ್, ಬೆಳಗಾವಿ, ರಾಯಚೂರು ಜಿಲ್ಲೆಗಳಿಂದ ವರದಿಗಳನ್ನು ತರಿಸಿಕೊಂಡಿದ್ದು ಕೆಲವು ಆದೇಶಗಳನ್ನು ತರಿಸಿಕೊಳ್ಳಲಾಗಿದೆ. ಕೆಲವು ಆದೇಶಗಳನ್ನು ಸಹ ನೀಡಲಾಗಿದೆ. ನದಿ ಪಾತ್ರಗಳಲ್ಲಿ ನೀರು ಹೆಚ್ಚಾಗಿ ಹರಿಯುವ ಸಂಭವಿದ್ದೆಡೆಗಳಲ್ಲಿ ವಿಶೇಷವಾಗಿ ಬೀದರ್ ಮತ್ತು ಮಹಾರಾಷ್ಟ್ರ ರಾಜ್ಯ ದಿಂದ ಜಲಾಶಯಗಳ ನೀರು ಹೊರಬಿಡುವ ಬಗ್ಗೆ ಅಲ್ಲಿನ ಅಧಿಕಾರಿಗಳ ಸಂಪರ್ಕವಿರಬೇಕು. ನೀರಿನ ಹರಿವಿನ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಂಡು ಇಲ್ಲಿ ಸ್ಥಳಾಂತರ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದೆ. ಒಂದು ವ್ಯವಸ್ಥೆ ಸೃಜಿಸಬೇಕೆಂದು ಸೂಚಿಸಿದೆ.
ಮನೆಗಳು ಬಿದ್ದರೆ ತುರ್ತು ಪರಿಹಾರವಾಗಿ 10 ಸಾವಿರ ರೂ.ಗಳನ್ನು ನೀಡಬೇಕು, ಪೂರ್ಣಪ್ರಮಾಣದಲ್ಲಿ ಬಿದ್ದರೆ 5 ಲಕ್ಷ, ತೀವ್ರ ಹಾನಿಗೆ 3 ಲಕ್ಷ ಹಾಗೂ ಅಲ್ಪ ಪ್ರಮಾಣದ ಹಾನಿಗೆ 50 ಸಾವಿರ ರೂ.ಗಳನ್ನು ಒದಗಿಸಲು ಸೂಚಿಸಿದೆ. ಬೆಳೆಹಾನಿಗೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಬೇಕು 13600 ಕೇಂದ್ರ ಸರ್ಕಾರದ ಮೊತ್ತ ಸೇರಿ ಒಟ್ಟು 25 ಸಾವಿರ ರೂ.ಗಳು, ತೋಟಗಾರಿಕಾ ಬೆಳೆಗೆ 18 ಸಾವಿರಕ್ಕೆ 28 ಸಾವಿರ ನೀಡಿ ಆದೇಶವನ್ನು ಹೊರಡಿಸಿದೆ. ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು. ರಸ್ತೆ , ಸೇತುವೆ, ಕಲ್ವರ್ಟ್ ದುರಸ್ತಿಗೆ 500 ಕೋಟಿ ರೂ.ಗಳನ್ನು ಒದಗಿಸಿದೆ. ಪ್ರವಾಹ ಪರಿಸ್ಥಿತಿ ಗೆ ಕೂಡಲೇ ಸ್ಪಂದಿಸಬೇಕು, ಎಲ್ಲಾ ಇಲಾಖೆಗಳ ಸಮನ್ವಯವಿರಬೇಕು ಹಾಗೂ ಪದೇ ಪದೇ ಪ್ರವಾಹಕ್ಕೆ ಒಳಗಾಗುವ ಗ್ರಾ.ಪಂಗಳಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು, ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಎಫ್ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ 5 ಸಾವಿರ ಪರಿಹಾರ ನೀಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಹಾಗಾಗಿದ್ದರೆ ಸರಿಪಡಿಸಲಾಗುವುದು. ಮೊದಲು ಸ್ಪಷ್ಟತೆ ಇರಲಿಲ್ಲ. ಈಗಾಗಲೇ ಈ ಬಗ್ಗೆ ಆದೇಶ ನೀಡಲಾಗಿದೆ. ಹೊಸ ಆದೇಶದಂತೆ ಪರಿಹಾರದ ನೀಡಲು ಆದೇಶಿಸಿದೆ ಎಂದರು.