ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಬಾಲೇನಹಳ್ಳಿ ಬಳಿಯಲ್ಲಿ ಇಂದು ಕ್ರೂಸರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ( Accident ) ಸಂಭವಿಸಿತ್ತು. ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಹೀಗೆ ಸಾವಪ್ಪಿದ ದುಖದ ನಡುವೆಯೂ ಕುಟುಂಬಸ್ಥರು ಮೃತರ ನೇತ್ರದಾವನ್ನು ( Eye Donation ) ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಇಂದು ಮೆರೆದಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬಾಲೇನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇಂದು ಲಾರಿ ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಸ್ಥಳದಲ್ಲಿಯೇ 9 ಮಂದಿ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದರು. ಅಲ್ಲದೇ ಮೃತರಿಗೆ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಿದ್ದರು.
ಈ ಬೆನ್ನಲ್ಲೇ ಮೃತ ಕುಟುಂಬಸ್ಥರ ಜೊತೆಗೆ ಶಿರಾ ತಹಶೀಲ್ದಾರ್ ಮಮತಾ ನಡೆಸಿದಂತ ನೇತ್ರದಾನದ ಮಾತುಕತೆ ಫಲಪ್ರದವಾಗಿದೆ. ಮೃತ 9 ಮಂದಿಯಲ್ಲಿ 6 ಜನರ ಕುಟುಂಬಸ್ಥರು ಮೃತರ ನೇತ್ರದಾನವನ್ನು ಮಾಡೋದಕ್ಕೆ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಮೃತರ ಕುಟುಂಬಸ್ಥರು ಮೆರೆದಿದ್ದಾರೆ.
ಅಂದಹಾಗೇ ಈ ಅಪಘಾತದಲ್ಲಿ ಮೃತಪಟ್ಟಿದ್ದಂತ ಕ್ರೂಸರ್ ಚಾಲಕ ಕೃಷ್ಣಾ, ಸುಜಾತ, ಪ್ರಭುಸ್ವಾಮಿ, ಸಿದ್ಧಯ್ಯಸ್ವಾಮಿ, ನಿಂಗಣ್ಣ ಹಾಗೂ ಮೀನಾಕ್ಷಿಯವರ ಕುಟುಂಬಸ್ಥರು ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.