ನವದೆಹಲಿ: ದೇಶಾದ್ಯಂತ ಲೋಕಸಭಾ ಚುನಾವಣೆ ನಡೆಯುತ್ತಿದೆ. ಮೊದಲ ಮತ್ತು ಎರಡನೇ ಹಂತದ ಮತದಾನ ಮುಗಿದಿದೆ. ಮೂರನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ. ಏತನ್ಮಧ್ಯೆ, ಚುನಾವಣಾ ಆಯೋಗವು ಮೊದಲ ಮತ್ತು ಎರಡನೇ ಹಂತದ ಮತದಾನದ ಶೇಕಡಾವಾರು ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.
ಮೊದಲ ಹಂತದಲ್ಲಿ ಶೇ.66.14 ಹಾಗೂ ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನ 102 ಕ್ಷೇತ್ರಗಳಿಗೆ ನಡೆದಿತ್ತು. ಎರಡನೇ ಹಂತದ ಮತದಾನ ಏಪ್ರಿಲ್ 26 ರಂದು 88 ಕ್ಷೇತ್ರಗಳಿಗೆ ನಡೆಯಿತು. 2019 ಕ್ಕೆ ಹೋಲಿಸಿದರೆ ಈ ಬಾರಿ ಮತದಾನ ಕಡಿಮೆಯಾಗಿದೆ ಎನ್ನಲಾಗಿದೆ.
2019 ರಲ್ಲಿ ಮೊದಲ ಹಂತದಲ್ಲಿ ಶೇಕಡಾ 69.43 ಮತ್ತು ಎರಡನೇ ಹಂತದಲ್ಲಿ ಶೇಕಡಾ 69.17 ರಷ್ಟು ಮತದಾನ ದಾಖಲಾಗಿತ್ತು. ಚುನಾವಣಾ ಆಯೋಗವು ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ನಂತರ ರಾಜಕೀಯವೂ ತೀವ್ರಗೊಂಡಿದೆ. ಚುನಾವಣಾ ಆಯೋಗವು ಈ ಅಂಕಿಅಂಶಗಳನ್ನು ತಡವಾಗಿ ಬಿಡುಗಡೆ ಮಾಡಿದೆ. ಪ್ರತಿಪಕ್ಷಗಳು ವಿಳಂಬವನ್ನು ಪ್ರಶ್ನಿಸಿವೆ.