ದಾವಣಗೆರೆ: ಪಂಚಗ್ಯಾರಂಟಿ ಯೋಜನೆಗಳಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಲ್ಲಿಯವರೆಗೆ 524.14 ಕೋಟಿ ರೂ.ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡುವ ಮೂಲಕ ಕ್ಷೇತ್ರದ ಜನತೆಗೆ 2023ರ ಚುನಾವಣಾ ಸಮಯದಲ್ಲಿ ನೀಡಿದ್ದ ವಾಗ್ಧನದಂತೆ ನಡೆದುಕೊಂಡಿದೆ ಎಂದು ರಾಜ್ಯ ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, “ನೋ ಕಮಿಷನ್ ನೋ ಕರಪ್ಷನ್” ಎಂಬ ಧ್ಯೇಯದೊಂದಿಗೆ ಪಂಚಗ್ಯಾರಂಟಿ ಯೋಜನೆಗಳನ್ನು ಯಾವುದೇ ಜಾತಿಮತ ಬೇಧವಿಲ್ಲದೆ ಜನರ ಜೀವನಮಟ್ಟ ಸುಧಾರಣೆಗೋಸ್ಕರ, ಪಾರದರ್ಶಕವಾಗಿ ಜಾರಿಗೆ ತಂದ ವಿಶ್ವದ ಅತಿದೊಡ್ಡ ಜನಕಲ್ಯಾಣ ಕಾರ್ಯಕ್ರಮ ಎಂದರು.
ಅನ್ನಭಾಗ್ಯ, ಶಕ್ತಿ ಯೋಜನೆಗೆ, ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳಡಿ ದಾವಣಗೆರೆ ಜಿಲ್ಲೆಗೆ ಇದುವರೆಗೂ 3523 ಕೋಟಿ 49 ಲಕ್ಷ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಪಂಚಗ್ಯಾರಂಟಿ ಯೋಜನೆಗಳಿಗಾಗಿ ಇಲ್ಲಿಯವರೆಗೆ 1 ಲಕ್ಷ 31 ಸಾವಿರ ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ವೆಚ್ಚ ಮಾಡುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ 1 ಲಕ್ಷ 36 ಸಾವಿರ ಕೋಟಿ ರೂ. ಹಣವನ್ನು ರಾಜ್ಯದ 224 ಕ್ಷೇತ್ರಗಳಿಗೆ ನೀಡುವ ಮೂಲಕ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ರೈತ ಪರ, ಮಹಿಳೆ ಪರ. ಹಿಂದುಳಿದ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಶ್ರಮಿಸುತ್ತಿರುವ, ಯುವಕರ ಆಶಾಕಿರಣ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 20 ದಿನಗಳ ಹಿಂದಷ್ಟೇ 4,48,450 ಕೋಟಿ ರೂ. ಆಯವ್ಯಯವನ್ನು ಮಂಡಿಸಿದ್ದಾರೆ. ಇದರಲ್ಲಿ 51,600 ಕೋಟಿ ರೂ.ಹಣವನ್ನು ಪಂಚ ಗ್ಯಾರಂಟಿಗಳಿಗಾಗಿ ಬಜೆಟ್ ನಲ್ಲಿ ಮೀಸಲಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ, ನಬಾರ್ಡ್ ನ ಅಸಹಕಾರದ ನಡುವೆಯೂ ರೈತರಿಗೆ ಕೃಷಿ ಚಟುವಟಿಕೆಗಳನ್ನು ಸಮರ್ಪಕವಾಗಿ ಕೈಗೊಳ್ಳಲು 30 ಸಾವಿರ ಕೋಟಿ ಹಣವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡುವ ತೀರ್ಮಾನವನ್ನು ಕಾಂಗ್ರೆಸ್ ಸರ್ಕಾರ ಕೈಗೊಂಡು ಅನ್ನದಾತರ ಬೆನ್ನೆಲುಬಾಗಿ ನಿಂತಿದೆ. 16 ಹಾಲು ಒಕ್ಕೂಟಗಳಿಂದ ಪ್ರತಿನಿತ್ಯ 1 ಕೋಟಿ ಲೀಟರ್ ಹಾಲು ಉತ್ಪಾದನೆ ಅಗುತ್ತಿದ್ದು, 5 ಸಾವಿರ ಕೋಟಿ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.
ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯಡಿ 700 ಕೋಟಿ ಉಚಿತ ಟಿಕೆಟ್ ನೀಡಲಾಗಿದ್ದು ಇದಕ್ಕಾಗಿ 18 ಸಾವಿರ ಕೋಟಿ ಹಣ ವೆಚ್ಚ ಮಾಡಲಾಗಿದೆ. ಯುವನಿಧಿಯಡಿ 3.08 ಲಕ್ಷ ಫಲಾನುಭವಿಗಳಿಗೆ 950 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 1,24,10,600 ಮಹಿಳೆಯರಿಗೆ ತಲಾ 2 ಸಾವಿರದಂತೆ ತಿಂಗಳಿಗೆ 2500 ಕೋಟಿ ಹಣವನ್ನು ನೀಡಲಾಗಿದ್ದು ಇದುವರೆಗೆ 65,000 ಕೋಟಿ ಹಣವನ್ನು ನೀಡಲಾಗಿದೆ. 1.60 ಕೋಟಿ ಮನೆಗಳಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಿದ್ದು ಇದಕ್ಕಾಗಿ ಸುಮಾರು 21 ಸಾವಿರ ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ಖರ್ಚು ಮಾಡಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.
ಒಟ್ಟಾರೆ ರಾಜ್ಯದ ಜನರ ಜೀವನ ಮಟ್ಟ ಸುಧಾರಣೆಗೆ ಪಂಚ ಗ್ಯಾರಂಟಿ ಯೋಜನೆಗಳು ನೆರವಾಗಿದೆ. ಜನರಿಗೆ ಕೊಳ್ಳುವ ಶಕ್ತಿ ವೃದ್ಧಿಯಾಗಿದ್ದು ಅವರ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡಿದೆ. ಪಂಚಗ್ಯಾರಂಟಿಗಳಲ್ಲಿ ಸಿಂಹಪಾಲು ಮಹಿಳೆಯರದ್ದಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ನೀಡಿದ್ದ ಮಹಿಳೆಯರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಕಾಂಗ್ರೆಸ್ ಬೆನ್ನಿಗೆ ನಿಂತು ಪ್ರೋತ್ಸಾಹಿಸಬೇಕು. ಮುಂಬರುವ ಸ್ಥಳೀಯ ಸಂಸ್ಥೆ, ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರ ಮತ ಕಾಂಗ್ರೆಸ್ ಗೆ ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೋಜ್ ಖಾನ್, ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಮೆಸ್ಕಾಂ ಅಧ್ಯಕ್ಷರಾದ ಹರೀಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಬೆಂಗಳೂರು ವಿಭಾಗದ ಜಿಲ್ಲಾ ಅಧ್ಯಕ್ಷರಾದ ಜಿ.ಕೃಷ್ಣಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಶಿವಣ್ಣ, ದಾವಣಗೆರೆ ಜಿಲ್ಲಾಧ್ಯಕ್ಷ ಶಾಮನೂರು ಬಸವರಾಜ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ರಾಮನಗರ ಜಿಲ್ಲಾಧ್ಯಕ್ಷ ಕೆ.ರಾಜು ಸೇರಿದಂತೆ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಕೋಲಾರ, ಮೈಸೂರು, ಹಾಸನ ಸೇರಿದಂತೆ ಬೆಂಗಳೂರು ಮತ್ತು ಮೈಸೂರು ವಿಭಾಗದ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರು, ತಾಲೂಕು ಅಧ್ಯಕ್ಷರು ಉಪಸ್ಥಿತರಿದ್ದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಪಂಚಗ್ಯಾರಂಟಿ ಕೊಡುಗೆ
ಅನ್ನಭಾಗ್ಯ ಯೋಜನೆಯಡಿ 1,60,731 ಫಲಾನುಭವಿಗಳಿದ್ದು ಜುಲೈ 2023ರಿಂದ ಡಿಸೆಂಬರ್ 2024ರವರೆಗೆ ನೇರ ನಗದು ವರ್ಗಾವಣೆ ಮುಖಾಂತರ ಅಕ್ಕಿ ಬದಲಾಗಿ 51.91ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ನಂತರದಲ್ಲಿ 2026 ಫೆಬ್ರವರಿ ತಿಂಗಳವರೆಗೆ 25.26 ಕೋಟಿ ರೂ. ಮೊತ್ತದ ಅಕ್ಕಿಯನ್ನು ವಿತರಣೆ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ 2023 ಆಗಸ್ಟ್ ನಿಂದ ಜನವರಿ 2026ರವರೆಗೆ 58,234 ಫಲಾನುಭವಿಗಳಿಗೆ ತಿಂಗಳಿಗೆ ತಲಾ 2000 ರೂ.ನಂತೆ 320.52 ಕೋಟಿ ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ. ಈ ಮುಖಾಂತರ ಪ್ರತಿ ಫಲಾನುಭವಿಗಳಿಗೆ ಇದುವರೆಗೂ ಒಟ್ಟು 56 ಸಾವಿರ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ.
ಗೃಹಜ್ಯೋತಿ ಯೋಜನೆಯಡಿ 2023 ಆಗಸ್ಟ್ ನಿಂದ ಫೆಬ್ರವರಿ 2026ರವರೆಗೆ 49,770 ಮನೆಗಳಿಗೆ 72.20 ಕೋಟಿ ರೂ. ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ.
ಶಕ್ತಿ ಯೋಜನೆಯಡಿ 2023 ಜೂನ್ ನಿಂದ ಫೆಬ್ರವರಿ 2026ರವರೆಗೆ 2,47,50,558 ಬಾರಿ ಮಹಿಳೆಯರು ಪ್ರಯಾಣಿಸಿದ್ದು ಇದರ ಟಿಕೆಟ್ ಮೌಲ್ಯ 53.97ಕೋಟಿ ರೂ.ಗಳನ್ನು ಸಾರಿಗೆ ನಿಗಮಕ್ಕೆ ಸರ್ಕಾರ ಪಾವತಿಸಿದೆ.
ಯುವನಿಧಿ ಯೋಜನೆಯಡಿ ನಿರುದ್ಯೋಗ ಪದವೀಧರರಿಗೆ ಜನವರಿ 2024ರಿಂದ ಇಲ್ಲಿಯವರೆಗೆ 922 ಪದವೀಧರ, 28 ಡಿಪ್ಲೊಮ ಪದವೀಧರರಿಗೆ ತಲಾ 3000 ಹಾಗೂ 1500 ರೂ.ನಂತೆ 28.08 ಲಕ್ಷ ರೂ.ಗಳನ್ನು ಅವರ ಜೀವನ ನಿರ್ವಹಣೆ ಅಥವಾ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಖರ್ಚು ಮಾಡಿದೆ.
284 ಬೂತ್ ಗಳಲ್ಲೂ ಗ್ಯಾರಂಟಿ ಸಮಿತಿ ವತಿಯಿಂದ ಪ್ರಚಾರ ಕೈಗೊಳ್ಳಬೇಕು. ಗ್ಯಾರಂಟಿಗಳು ಕಾಂಗ್ರೆಸ್ ಗೆ ಶಕ್ತಿ ನೀಡಿದೆ. ರಾಜ್ಯ ಸರ್ಕಾರ ಪಂಚಗ್ಯಾರಂಟಿ ಯೋಜನೆಗಳಿಗಾಗಿ ಇಲ್ಲಿಯವರೆಗೆ 1.31 ಲಕ್ಷ ಕೋಟಿ ರೂ. ಹಣ ವ್ಯಯ ಮಾಡಿದೆ. ಇದನ್ನು ಜನತೆಗೆ ತಿಳಿಸುವ ಕೆಲಸ ಸಮಿತಿ ಸದಸ್ಯರ ಮೇಲಿದೆ.
-ಎಚ್.ಎಂ.ರೇವಣ್ಣ, ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಪಂಚ ಗ್ಯಾರಂಟಿ ಮಹಿಳೆಯರಲ್ಲಿ, ರೈತರ ಜೀವನದಲ್ಲಿ ಬದಲಾವಣೆ ತಂದಿವೆ. ಗ್ಯಾರಂಟಿ ಪ್ರಯೋಜನಗಳನ್ನು ಮನೆಮನೆಗೆ ಹೋಗಿ ತಿಳಿಸಿಕೊಡುವ ಜವಾಬ್ದಾರಿ ಸಮಿತಿ ಸದಸ್ಯರ ಮೇಲಿದೆ.
-ಮೆಹರೋಜ್ ಖಾನ್, ಉಪಾಧ್ಯಕ್ಷರು, ಗ್ಯಾರಂಟಿ ಅನುಷ್ಠಾನ ಸಮಿತಿ
ಜಾನಪದ ಸಂಗೀತವೇ ಎಲ್ಲ ಕಲೆಗಳಿಗೆ ಮೂಲ: ಕಾಂತಾರ ಸಿನಿಮಾ ಗಾಯಕ ವೆಂಕಟೇಶ್ ಡಿ.ಸಿ
BIG NEWS: ರಾಜ್ಯದಲ್ಲೊಂದು ಧಾರುಣ ಘಟನೆ: ಹಾಲುಣಿಸಿದ ಕೆಲವೇ ಕ್ಷಣದಲ್ಲೇ ಹಸುಗೂಸಿನ ತಾಯಿ ಸಾವು








