ಬೆಂಗಳೂರು: ನಿನ್ನೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದರು. ಮಗಳು ಉಮಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೆಎಸ್ಆರ್ಟಿಸಿ ಬಸ್ ಚಾಲಕ ಮಾರುತಿಯನ್ನು ಬಂಧಿಸಿದ್ದಾರೆ.
ಮೃತ ಉಮಾದೇವಿ ಪುತ್ರಿ ವನಿತಾ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಶವಾಗಾರದಲ್ಲಿ ಉಮಾದೇವಿ ಮೃತದೇಹವಿದ್ದು ಬೆಳಗ್ಗೆ 10 ಗಂಟೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ಸನ್ನು ಜಪ್ತಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಅಧಿಕಾರಿಗಳು ಇನ್ನು ಮುಂದೆ ವಾರಕ್ಕೆ ಇಂತಿಷ್ಟು ದೂರ ನಡೆದು ಸಮಸ್ಯೆಗಳನ್ನು ಗಮನಿಸಬೇಕು, ಜನರ ಅಹವಾಲು ಆಲಿಸಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಘಟನೆ ಹಿನ್ನೆಲೆ?
ಉಮಾ ಅವರು ಭಾನುವಾರ ಶ್ರೀನಗರದಲ್ಲಿರುವ ಪುತ್ರಿ ವನಿತಾ ಮನೆಗೆ ಹೋಗಿದ್ದರು. ಸೋಮವಾರ ಬೆಳಗ್ಗೆ ವನಿತಾ ಜತೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಬೆಳಗ್ಗೆ 9:30ರ ಸುಮಾರಿಗೆ ವಾಟಾಳ್ ನಾಗರಾಜ್ ರಸ್ತೆಯ ಸುಜಾತ ಥಿಯೇಟರ್ ಬಳಿ ಹೋಗುವಾಗ ರಸ್ತೆ ಗುಂಡಿ ಕಂಡಿದೆ. ಹೀಗಾಗಿ ವನಿತಾ ಗುಂಡಿ ತಪ್ಪಿಸಲು ಹೋಗಿದ್ದಾರೆ. ಈ ವೇಳೆ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಎಸ್ಐ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಉಮಾ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟಿದ್ದಾರೆ.