ಹಾಸನ: ಸ್ತ್ರೀ ಸಾಮರ್ಥ್ಯ ಯೋಜನೆಯಡಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ, ತರಬೇತಿ ನೀಡಿ, ಸಂಘದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ 5 ಲಕ್ಷ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಅವರು ನಿನ್ನೆ ಬೇಲೂರು ತಾಲ್ಲೂಕಿನ ಚಿಲ್ಕೂರು ಶ್ರೀ ಮಠ ಪುಷ್ಪಗಿರಿ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ಹಾಗೂ ಗುರು ಕರಿಬಸವೇಶ್ವರ ಅಜ್ಜಯ್ಯನವರ ಪಲ್ಲಕ್ಕಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ದುಡಿಮೆಗೆ ಅವಕಾಶ ದೊರೆತರೆ ರಾಜ್ಯದ ಜನತೆ ಶ್ರೀಮಂತರಾಗುತ್ತಾರೆ. ಪ್ರತಿ ದುಡಿಮೆಗೆ ನಾವು ಸಹಾಯ ಮಾಡುವ ಮೂಲಕ ರಾಜ್ಯವೂ ಅಭಿವೃದ್ಧಿಯಾಗುತ್ತದೆ. ಈ ಮೂಲ ತತ್ವದಿಂದ ಆಡಳಿತ ಸೂತ್ರವನ್ನು ನಡೆಸುತ್ತಿದ್ದೇವೆ. ರೈತರು, ರೈತರ ಸಂಘಗಳು ಸ್ವಾಮೀಜಿಗಳ ರಣಘಟ್ಟ ನೀರಾವರಿ ಹೋರಾಟದಲ್ಲಿ ಭಾಗಿಯಾಗಿದ್ದರು. ಜನರ ಹಿತದೃಷ್ಟಿಯಿಂದಲೇ ಕೈಗೊಂಡ ಹೋರಾಟದ ಸಂದರ್ಭದಲ್ಲಿ ಈ ಭಾಗದ ಬರ ನೀಗಿಸಲು ಈ ಕೆಲಸವನ್ನು ಒತ್ತಾಯ ಮಾಡಿ ಲಿಂಗೇಶ್ ಮಾಡಿಸಿದ್ದರು. .ರಣಘಟ್ಟ ಕೂಡ ಬಿಜೆಪಿ ಸರ್ಕಾರವಿದ್ದಾಗಲೇ ಅನುಮೋದನೆಗೊಂಡಿತು ಎಂದರು.
ಜನಸ್ಪಂದನೆಯಾದಾಗ ಸರ್ಕಾರಕ್ಕೆ ಕೀರ್ತಿ
ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸವನ್ನು ಮಾಡಿದಾಗ ಜನಸ್ಪಂದನೆಯಾದಾಗ ಸರ್ಕಾರಕ್ಕೆ ಕೀರ್ತಿ, ಜನರಿಗೆ ಅನುಕೂಲವಾಗುತ್ತದೆ. ಜನರ ರಾಜಕಾರಣ ಎನ್ನುತ್ತಾರೆ. ಜನರು ಕೊಟ್ಟಿದ್ದನ್ನು ಜನರಿಗಾಗಿಯೇ ನೀಡಬೇಕು. ಹೆಬ್ಬಾಳ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪುಷ್ಪ ಗಿರಿಗ್ರಾಮೀಣಾಭಿವೃದ್ಧಿ ಸಂಘ
ಬೆಟ್ಟ ಪ್ರದೇಶವಾದ ಪುಷ್ಪಗಿರಿ ಧಾರ್ಮಿಕ ಕೇಂದ್ರವನ್ನು ಅಭಿವೃದ್ಧಿಗೊಳಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ಶ್ರೀ ಡಾ.ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ರಾಜ್ಯದ ಗ್ರಾಮೀಣಾಭಿವೃದ್ಧಿಯ ಆಶಯದಿಂದ ಗ್ರಾಮೀಣಾಭಿವೃದ್ಧಿ ಸಂಘಗಳನ್ನು ಪ್ರಾರಂಭಿಸಿದ್ದಾರೆ. ರಾಜ್ಯದೆಲ್ಲೆಡೆ1600 ಸಂಘಗಳನ್ನು ಸ್ಥಾಪಿಸಿ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪುಷ್ಪಗಿರಿಮಠದ ಸಂಘಗಳಿಗೆ ಸಹಾಯದ ಭರವಸೆ
ಪುಷ್ಪಗಿರಿ ಸಂಸ್ಥಾನದ ಸ್ವಾಮೀಜಿಗಳು ನಮ್ಮ ಊರಿನಿಂದ ಇಲ್ಲಿಗೆ ಬಂದು, ರಾಜ್ಯದ ಗ್ರಾಮೀಣ ಅಭಿವೃದ್ಧಿಗೆ ಸಣ್ಣವಯಸ್ಸಿನಲ್ಲಿ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ. ಬಹಳ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಪುಷ್ಪಗಿರಿಮಠದ ಸಂಘಗಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಪುಷ್ಪಗಿರಿಮಠ ಇನ್ನೊಂದು ಶ್ರೀಶೈಲವಾಗಲಿ. ಭಾಗದ ಸಾಂಸ್ಕೃತಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲಿ. ಮಠ ಧ್ಯಾತ್ಮಿಕ ಹಾಗೂ ಅಭಿವೃದ್ಧಿಯ ಕೇಂದ್ರವಾಗಲಿ ಎಂದರು.
ಆನೆ ಹಾವಳಿ ತಡೆಗೆ ಕ್ರಮ
ಆನೆ ಕಾಟವನ್ನು ತಪ್ಪಿಸಲು ಹಿಂದೆಂದೂ ಮಾಡಿರದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆನೆ ಹಾವಳಿ ತಡೆಗಟ್ಟಲು ಅರಣ್ಯ ಕಾರ್ಯಪಡೆಯನ್ನು ರಚಿಸಲಾಗಿದೆ. 24/7 ಕೆಲಸ ಮಾಡಲಿದ್ದು,ಬಜೆಟ್ ನಲ್ಲಿ ಈಗಾಗಲೇ ನೂರು ಕೋಟಿ ರೂ.ಗಳ ಅನುದಾನ ಮೀಸಲಿರಿಸಿದ್ದು, ಈ ಕಾರ್ಯಕ್ಕೆ ಹೆಚ್ಚುವರಿಯಾಗಿ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು.. ಕಾರ್ಯಪಡೆಗಳಿಗೆ ಹೆಚ್ಚಿನ ತರಬೇತಿ, ವಾಹನ, ಸಲಕರಣೆ, ಪರಿಣಿತರನ್ನು ಜೋಡಿಸಲಾಗುವುದು ಆನೆಗಳನ್ನು ಕಾಡಿಗೆ ಅಟ್ಟಲು ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಸಕಲೇಶಪುರದಲ್ಲಿ ಕಾರ್ಯಪಡೆಯ ಕಚೇರಿ ತೆರೆಯಲಾಗುತ್ತಿದೆ ಎಂದರು.
ದುಡಿಯುವ ಕೈಗಳಿಗೆ ಉದ್ಯೋಗ
ಸ್ತ್ರೀ ಸಾಮರ್ಥ್ಯ ಯೋಜನೆಯಡಿ 33 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂ. ಆರ್ಥಿಕ ಸಹಾಯ, ತರಬೇತಿ ನೀಡಿ, ಸಂಘದಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ 5 ಲಕ್ಷ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ.ಈ ಯೋಜನೆಯಂತೆಯೇ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಿಂದ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ಕಾಯಕವೇ ಕೈಲಾಸ ಎಂಬಂತೆ ದುಡಿಯುವ ಕೈಗಳಿಗೆ ಸರ್ಕಾರ ಉದ್ಯೋಗ ನೀಡುತ್ತಿದೆ. ಕಾಯಕನಿಷ್ಠೆ ಇರುವ ಸಮಾಜ ನಿರ್ಮಾಣವಾದಾಗ ಬಡತನವಿರುವುದಿಲ್ಲ. ಸಮಾನತೆಯನ್ನು ಸ್ಥಾಪಿಸಿ ಆರ್ಥಿಕ ಅಭಿವೃದ್ಧಿ ಮಾಡಲಾಗುವುದು ಎಂದರು.
ಸಮಾರಂಭದಲ್ಲಿ ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಡಾ.ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಬಿ.ಎ.ಬಸವರಾಜ, ಶಾಸಕ ಕೆ.ಎಸ್ ಲಿಂಗೇಶ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
BIG BREAKING NEWS: ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ವಿಧಿವಶ | Actor Vikram Gokhale passes away
BREAKING NEWS: ಮೇಘಾಲಯದ ತುರಾ ಬಳಿ 3.4 ತೀವ್ರತೆಯ ಭೂಕಂಪ | Earthquake in Meghalaya