ಹುಬ್ಬಳ್ಳಿ : ಹೊಸ ವರ್ಷದ ಜನವರಿ ಅಂತ್ಯಕ್ಕೆ ಎಲ್ಲಾ 438 ʼನಮ್ಮ ಕ್ಲಿನಿಕ್ʼಗಳು ( Namma Clinic ) ಕಾರ್ಯಾರಂಭವಾಗಲಿವೆ. ಹಾಗೆಯೇ ಮಹಿಳೆಯರಿಗೆ ಮೀಸಲಾದ ʼಆಯುಷ್ಮತಿʼ ಕ್ಲಿನಿಕ್ಗಳನ್ನೂ ಜನವರಿಯಲ್ಲೇ ಉದ್ಘಾಟಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮೊದಲ ʼನಮ್ಮ ಕ್ಲಿನಿಕ್ʼಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವರು, ನಮ್ಮ ಕ್ಲಿನಿಕ್ನಲ್ಲಿ ಲ್ಯಾಬ್ ಪರೀಕ್ಷೆ, ತಪಾಸಣೆ, ಔಷಧಿ ಸಂಪೂರ್ಣ ಉಚಿತವಾಗಿದ್ದು, ಇದು ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರುವ ಹೆಜ್ಜೆಯಾಗಿದೆ. ಸದ್ಯ 114 ಕ್ಲಿನಿಕ್ಗಳನ್ನು ಉದ್ಘಾಟಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿ ವಾರಕ್ಕೆ 100 ರಂತೆ ಕ್ಲಿನಿಕ್ಗಳನ್ನು ಉದ್ಘಾಟನೆ ಮಾಡಿ, ಜನವರಿ ಅಂತ್ಯಕ್ಕೆ ಎಲ್ಲಾ 438 ಕ್ಲಿನಿಕ್ಗಳನ್ನು ಆರಂಭಿಸಲಾಗುವುದು. ಹಾಗೆಯೇ, ಆಯುಷ್ಮತಿ ಕ್ಲಿನಿಕ್ ಕೂಡ ಆರಂಭವಾಗಲಿದೆ. ಇದು ಮಹಿಳೆಯರಿಗೆ ನಮ್ಮ ಸರ್ಕಾರ ನೀಡುತ್ತಿರುವ ಹೊಸ ವರ್ಷದ ಕೊಡುಗೆ ಎಂದು ತಿಳಿಸಿದರು.
ಮನೆ ಬಾಗಿಲಿಗೆ ಔಷಧಿ
ರಾಜ್ಯದಲ್ಲಿ 7 ಸಾವಿರಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಈಗಾಗಲೇ ಆರಂಭಿಸಿದ್ದು, ಇಲ್ಲಿ 30 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರೂ ವರ್ಷಕ್ಕೆ ಒಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಭಾರತ ಈಗ ಮಧುಮೇಹದ ಕೇಂದ್ರವಾಗಿದ್ದು, ಇಂತಹ ಅಸಾಂಕ್ರಾಮಿಕ ರೋಗಗಳ ಪತ್ತೆ ಅಗತ್ಯವಿದೆ. ಇದಕ್ಕಾಗಿ ಕಳೆದ ಒಂದು ವರ್ಷದಲ್ಲಿ ಈ ಕೇಂದ್ರಗಳಲ್ಲಿ ಶೇ.60 ರಷ್ಟು ಜನರನ್ನು ತಪಾಸಣೆ ಮಾಡಿದ್ದು, ವಿವಿಧ ರೋಗಗಳಿಗೆ ಉಚಿತ ಔಷಧಿ ನೀಡಲಾಗುತ್ತಿದೆ. ಜನವರಿ ತಿಂಗಳಿಂದ ಮಧುಮೇಹ, ಬಿಪಿ, ಕ್ಷಯ ಮೊದಲಾದ ರೋಗಗಳಿಗೆ ಔಷಧಿಯನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಇತಿಹಾಸದಲ್ಲಿ ಯಾವ ಸರ್ಕಾರವೂ ಒಂದೇ ಬಾರಿಗೆ 114 ಕ್ಲಿನಿಕ್ಗಳನ್ನು ಉದ್ಘಾಟನೆ ಮಾಡಿಲ್ಲ. ಇಂದು ನಮ್ಮ ಸರ್ಕಾರದ ಮೂಲಕ ಸಾರ್ವಕಾಲಿಕ ದಾಖಲೆಯಾಗಿದೆ. ಸಾಮಾನ್ಯ ಜನರ ಮುಖ್ಯಮಂತ್ರಿಯಾಗಿರುವ, ʼಕಾಮನ್ ಮ್ಯಾನ್ʼ ಬಸವರಾಜ ಬೊಮ್ಮಾಯಿ ಅವರಿಂದ ʼನಮ್ಮ ಕ್ಲಿನಿಕ್ʼಗಳು ಉದ್ಘಾಟನೆಯಾಗಿವೆ ಎಂದರು.
ನಗರಗಳೆಂದರೆ ಶ್ರೀಮಂತರೇ ಇರುವ ಪ್ರದೇಶ ಎಂಬ ತಪ್ಪು ಕಲ್ಪನೆ ಇದೆ. ನಗರಗಳಲ್ಲಿರುವ ಬಡವರು, ಕೂಲಿ ಕಾರ್ಮಿಕರು, ವಲಸೆ ಬಂದವರು, ಕೊಳೆಗೇರಿ ನಿವಾಸಿಗಳ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಇಂದು ಮೊದಲ ನಮ್ಮ ಕ್ಲಿನಿಕ್ನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ. ಒಟ್ಟು 114 ಕ್ಲಿನಿಕ್ಗಳನ್ನು ವಿವಿಧ ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ಉದ್ಘಾಟಿಸಲಾಗುತ್ತಿದೆ ಎಂದು ತಿಳಿಸಿದರು.
ಒಂದು ಕ್ಲಿನಿಕ್ನಲ್ಲಿ ಒಬ್ಬ ವೈದ್ಯ, ಲ್ಯಾಬ್ ತಂತ್ರಜ್ಞ, ನರ್ಸ್, ಡಿ ಗ್ರೂಪ್ ನೌಕರ ಇರುತ್ತಾರೆ. ಜ್ವರ, ಕೆಮ್ಮು, ನೆಗಡಿ ಮೊದಲಾದ ಸಣ್ಣ ಸಮಸ್ಯೆಗಳಿಗೆ ಹಿಂದೆ ಜಿಲ್ಲಾಸ್ಪತ್ರೆಗೆ ಹೋಗಬೇಕಿತ್ತು. ಆದರೆ ಈಗ ನಮ್ಮ ಕ್ಲಿನಿಕ್ಗೆ ಹೋಗಿ ಉಚಿತವಾಗಿ ಸೇವೆ ಪಡೆಯಬಹುದು. ಬೇರೆ ಆಸ್ಪತ್ರೆಗಳಲ್ಲಿ 10 ರೂ. ಶುಲ್ಕ ಪಡೆಯಲಾಗುತ್ತಿತ್ತು. ಆದರೆ ನಮ್ಮ ಕ್ಲಿನಿಕ್ನಲ್ಲಿ ಬಿಡಿಗಾಸನ್ನೂ ನೀಡಬೇಕಿಲ್ಲ ಎಂದು ವಿವರಿಸಿದರು.
ಆಯುಷ್ಮಾನ್ ಕಾರ್ಡ್, ಪ್ರಧಾನಿಗಳಿಂದ ವಿತರಣೆ
ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇಲ್ಲದಿದ್ದರೆ ಸಂಪದ್ಭರಿತ ನಾಡನ್ನು ಸೃಷ್ಟಿಸಲು ಸಾಧ್ಯವಿಲ್ಲ. ಒಂದು ದೇಶ-ಒಂದು ಪಡಿತರ ಚೀಟಿ, ಒಂದು ದೇಶ-ಒಂದು ತೆರಿಗೆ ಎಂಬಂತೆ, ಒಂದು ದೇಶ-ಒಂದು ಹೆಲ್ತ್ ಕಾರ್ಡ್ ಎಂಬ ಘೋಷಣೆಯ ಆಯುಷ್ಮಾನ್ ಕಾರ್ಡ್ಗಳನ್ನು ನೀಡಲಾಗುತ್ತಿದೆ. 1.20 ಕೋಟಿ ಕಾರ್ಡ್ಗಳ ನೋಂದಣಿ ಪೂರ್ಣಗೊಂಡಿದ್ದು, ಈ ಕಾರ್ಯಕ್ರಮಕ್ಕೂ ಚಾಲನೆ ನೀಡಬೇಕಿತ್ತು. ಆದರೆ ಕೇಂದ್ರದ ಆರೋಗ್ಯ ಸಚಿವರು ಕರೆ ಮಾಡಿ ಶ್ಲಾಘಿಸಿ, ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಈ ಕಾರ್ಡ್ ವಿತರಣೆ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ. ಆದ್ದರಿಂದ ಪ್ರಧಾನಿಗಳ ಕೈಯಿಂದಲೇ ಕಾರ್ಡ್ಗಳನ್ನು ಜನರಿಗೆ ಕೊಡಿಸಲಾಗುವುದು ಎಂದು ತಿಳಿಸಿದರು.
ಮೊಬೈಲ್ ಬಳಕೆದಾರರೇ ಎಚ್ಚರ ; ಈ ತಪ್ಪು ಮಾಡಿದ್ರೆ ನಿಮ್ಮ ‘ಸಿಮ್ ಕಾರ್ಡ್’ ನಿಮ್ಮನ್ನ ಜೈಲಿಗೆ ಕಳುಹಿಸುತ್ತೆ |Sim Card
42 ಲಕ್ಷ ಜನರಿಗೆ ಉಚಿತ ಚಿಕಿತ್ಸೆ
ಕೆಲವರು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ ನಾಲ್ಕು ವರ್ಷಗಳಲ್ಲಿ 42 ಲಕ್ಷ ಜನರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಸೇವೆ ನೀಡಿದ್ದು, ಅದಕ್ಕಾಗಿ 5 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಪೈಕಿ ಶೇ.70 ರಷ್ಟು ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ಆರೋಗ್ಯ ವ್ಯವಸ್ಥೆ ಸರಿ ಇಲ್ಲ ಎಂದು ದೂರುವುದು ಸುಲಭ. ಆದರೆ ಉಚಿತ ಸೇವೆಯ ಪರಂಪರೆಯನ್ನು ನೋಡಬೇಕು. ನಮ್ಮ ಅವಧಿಯಲ್ಲಿ ಆಸ್ಪತ್ರೆಗಳ ಮೂಲಸೌಕರ್ಯದಲ್ಲಿ 5-6 ಪಟ್ಟು ಪ್ರಗತಿ, ಉಚಿತ ಔಷಧಿ ವಿತರಣೆ, ಡಯಾಲಿಸಿಸ್ ಸಂಖ್ಯೆಯನ್ನು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ ಸೇರಿದಂತೆ ಅನೇಕ ಸುಧಾರಣೆ ಮಾಡಲಾಗಿದೆ ಎಂದರು.
ಇತರೆ ಅಂಶಗಳು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹುಬ್ಬಳ್ಳಿಗೆ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಮಂಜೂರು ಮಾಡಿದ್ದು, ಜನವರಿಯಲ್ಲಿ ಶಂಕುಸ್ಥಾಪನೆ ನೆರವೇರಲಿದೆ.
ಹಿಂದೆ ಅನುದಾನ ಕೆಲವೇ ಭಾಗಗಳಿಗೆ ಹೋಗುತ್ತಿತ್ತು. ಮುಖ್ಯಮಂತ್ರಿಗಳು ಪ್ರತಿ ತಾಲೂಕು ಮಟ್ಟದಲ್ಲಿ ಹಿಂದುಳಿದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದಾರೆ.
14 ಬಗೆಯ ತಪಾಸಣೆಗಳು ನಮ್ಮ ಕ್ಲಿನಿಕ್ನಲ್ಲಿ ಲಭ್ಯ. ಔಷಧಿ, ಪರೀಕ್ಷೆ ಎಲ್ಲವೂ ಉಚಿತ.