ಬಳ್ಳಾರಿ : ಹೂವಿನಹಡಗಲಿಯ 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಮೂಲಕ ಈ ಭಾಗದ ರೈತರ ನೀರಿನ ಬವಣೆಯನ್ನು ನೀಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಹೂವಿನಹಡಗಲಿ ಜನಸಂಕಲ್ಪ ಯಾತ್ರೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ನಾನು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ಸಾರಿ ಇಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಸಿಂಗಟಾಲೂರು ಏತ ನೀರಾವರಿ ಪೂರ್ಣ ಮಾಡಬೇಕು ಎಂದು ಜನ ಬೇಡಿಕೆ ಇಟ್ಟಿದ್ದರು. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಹೂವಿನ ಹಡಗಲಿಯ 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಯಿತು. ಹೂವಿನಹಡಗಲಿಯಲ್ಲಿ ಕೆರೆ ತುಂಬಿಸುವ ಕೆಲಸವನ್ನೂ ಮಾಡಲಾಗಿದೆ. ಹೂವಿನ ಹಡಗಲಿಯ ಅಂತರ್ಜಲ ಹೆಚ್ಚಿಸಲು ಕೆಲಸ ಮಾಡಲಾಗಿದೆ. ಈ ಭಾಗದ ರೈತರಿಗೆ ನೀರಿನ ಬರ ನಿವಾರಿಸಲು ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪ ಅವರು ಕಾರಣ. ಹುಲಿಗುಡ್ಡದ ಯೋಜನೆ ತಾವು ಮಾಡಿದ್ದೇವೆ ಅಂತ ಕೆಲವರು ಹೇಳಿಕೊಳ್ಳುತ್ತಿದ್ದರು. ಅದನ್ನು ರದ್ದು ಮಾಡಿ ಸಿಂಗಟಾಲೂರು ಯೋಜನೆಗೆ ಜೋಡಿಸಿ ರೂಪಿಸಲಾಯಿತು. ತಡಕಲ್ಲ ನೀರಾವರಿ ಯೊಜನೆಯನ್ನು ಪೂರ್ಣ ಮಾಡಿ ಲೋಕಾರ್ಪಣೆ ಮಾಡಲಾಗುವುದು ಎಂದರು.
ಹೂವಿನಹಡಗಲಿಯ ಸಮಗ್ರ ಅಭಿವೃದ್ಧಿ ಮಾಡಿ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಏರ್ಪಡಿಸುವ ಈ ಭಾಗಕ್ಕೆ ನಾನು ನೀಡಿದ ಯೋಜನೆಗಳನ್ನು ನಿಮ್ಮ ಮುಂದೆ ರಿಪೋರ್ಟ್ ಕಾರ್ಡ್ ಇಟ್ಡು ಮತ್ತೆ ಅಧಿಕಾರಕ್ಕೆ ಬಂದು ಕನ್ನಡ ನಾಡಿನಲ್ಲಿ ಕಮಲ ಅರಳಿಸಿ ಕಾಂಗ್ರೆಸ್ ನ್ನು ಬೇರು ಸಮೇತ ಕಿತ್ತು ಹಾಕಬೇಕು. ನಮ್ಮ ನೆಚ್ಚಿನ ನಾಯಕರಾದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 150 ಸ್ಥಾನ ಗೆಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು, ಆನಂದಸಿಂಗ್ ಹಾಗೂ ಮತ್ತಿತರರು ಹಾಜರಿದ್ದರು.