ವಿಜಯಪುರ: ಐಎಎಸ್ ಆಕಾಂಕ್ಷಿ ಎಂದು ಹೇಳಿಕೊಂಡು ಫೇಸ್ಬುಕ್ನಲ್ಲಿ ಯುವಕನನ್ನು ಪರಿಚಯ ಮಾಡಿಕೊಂಡು, ಆತನಿಂದ ಬೆತ್ತಲೆ ವೀಡಿಯೋ ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡಿ 40 ಲಕ್ಷ ರೂ. ಪಡೆದು ವಂಚಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮ ಪರಮೇಶ್ವರ್ ಹಿಪ್ಪರಗಿ ಎಂಬ ಯುವಕನಿಗೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಮಹಿಳೆಯೊಬ್ಬಳು 40 ಲಕ್ಷ ಪಡೆದು ವಂಚಿಸಿದ್ದಳು. ಈ ವಿಷಯ ತಿಳಿದು, ವಿಜಯಪುರ ಸಿಇಎನ್ ಪೊಲೀಸರು ಪ್ರಕರಣ ಭೇದಿಸಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ಮೂಲದ ಮಂಜುಳಾ ಎಂಬಾಕೆ ಫೇಸ್ಬುಕ್ ಫ್ರೆಂಡ್ ಆಗಿ ಯುವಕನನ್ನು ವಂಚಿಸಿದ್ದಳು. ಇದಕ್ಕೆ ಆಕೆಯ ಪತಿಯೇ ಸಾಥ್ ನೀಡಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಪತಿ ಸ್ವಾಮಿ ಹಾಗೂ ತಾನು ಸೇರಿಯೇ ಈ ಯುವಕನ ಬೆತ್ತಲೆ ವೀಡಿಯೋ ಇಟ್ಟುಕೊಂಡು ವಂಚನೆ ಮಾಡಿದ್ದೇವೆ ಎಂದು ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.