ಜಬಲ್ಪುರ: ಮಧ್ಯಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣವಾದ ಜಬಲ್ಪುರದ ನರ್ಮದಾ ನದಿಯಲ್ಲಿ ಗುರುವಾರ ಸಂಜೆ ಭೀಕರ ದೋಣಿ ದುರಂತ ಸಂಭವಿಸಿದೆ. ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ‘ಕ್ರೂಸ್ ಬೋಟ್’ ನೀರು ಪಾಲಾಗಿದ್ದು, ಘಟನೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತ ಸಂಭವಿಸಿದ ಸಮಯದಲ್ಲಿ ದೋಣಿಯಲ್ಲಿ ಚಾಲಕ ಸೇರಿದಂತೆ ಒಟ್ಟು 31 ಜನರಿದ್ದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ವಿಪತ್ತು ನಿರ್ವಹಣಾ ಪಡೆ (SDRF) ಸ್ಥಳಕ್ಕೆ ಧಾವಿಸಿದ್ದು, 27 ಜನರನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತಪಟ್ಟ ನಾಲ್ವರಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. ಮೃತರ ದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ದೋಣಿಯಲ್ಲಿ ಮಿತಿಗಿಂತ ಹೆಚ್ಚಿನ ಜನರನ್ನು ಹತ್ತಿಸಿಕೊಂಡಿದ್ದು ಮತ್ತು ಲೈಫ್ ಜಾಕೆಟ್‌ಗಳ ಕೊರತೆಯೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ನದಿಯಲ್ಲಿನ ಅತಿಯಾದ ನೀರಿನ ಹರಿವು ಕೂಡ ದೋಣಿ ನಿಯಂತ್ರಣ ತಪ್ಪಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.








