ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ. ಆದರೆ ಇದು ಯಾವ ವ್ಯಕ್ತಿಯ ಹೋರಾಟ ಅಲ್ಲ, ಇದು ಸಮುದಾಯದ ಹೋರಾಟ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಸಭೆ ನಡೆಸಿ ಹೋರಾಟದ ಬಗ್ಗೆ ಚರ್ಚಿಸುತ್ತೇನೆ. ಈಗಾಗಲೇ ಶಿಗ್ಗಾಂವಿಯಲ್ಲಿ ನಾವು ಒಂದು ಬಾರಿ ಹೋರಾಟ ಮಾಡಿದ್ದೇವೆ. ವಿನಾಕಾರಣ ವಿಳಂಬ ಮಾಡಲು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕ್ತಿದ್ದಾರೆ ಅನಿಸುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮನಸ್ಸಿನಲ್ಲಿ ಮೀಸಲಾತಿ ಕೊಡಬೇಕು ಅಂತಾನೇ ಇದೆ. ಯಾರ್ಯಾರು ಏನು ಮಾಡುತ್ತಿದ್ದಾರೆ ಅಂತಾ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ರಾಜಕೀಯ ಏನೇ ಮಾಡಲಿ, ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ಮಾಡಬಾರದು ಎಂದರು.
ಮೀಸಲಾತಿ ನೀಡದಿದ್ದರೆ ಚುನಾವಣೆಯಲ್ಲಿ ಪರಿಣಾಮ ಬೀರುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಾಯಿ ಬಿಟ್ಟು ಹೇಳಲು ಹೋಗಲ್ಲ. ಅದರ ಪರಿಣಾಮ ಸರ್ಕಾರಕ್ಕೆ ಗೊತ್ತಿದೆ. ಈಗಾಗಲೇ ಸಮಾಜ ನಿರಾಸೆಗೊಂಡಿದ್ದು ಅವರಿಗೆ ಗೊತ್ತಿದೆ. ಹೀಗಾಗಿ ಪರಿಣಾಮ ಬೀರದ ಹಾಗೇ ಸರ್ಕಾರ ಆಲೋಚನೆ ಮಾಡಬೇಕು ಎಂದರು.