ಬೆಂಗಳೂರು : ಆನೆ ಮತ್ತು ಮಾನವ ಸಂಘರ್ಷದಿಂದ ರಾಜ್ಯದಲ್ಲಿ ಪ್ರತಿವರ್ಷ 50 ಸಾವು ಸಂಭವಿಸುತ್ತಿದ್ದು, ಅಮೂಲ್ಯ ಜೀವ, ಬೆಳೆ ಉಳಿಸಲು ರೈಲ್ವೆ ಬ್ಯಾರಿಕೇಡ್ ಪರಿಹಾರವಾಗಿದ್ದು, 324 ಕಿ.ಮೀ. ತಡೆಗೋಡೆ ನಿರ್ಮಾಣಕ್ಕೆ 2 ವರ್ಷದಲ್ಲಿ 500 ಕೋಟಿ ಹೆಚ್ಚಿನ ಅನುದಾನ ನೀಡುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿಂದು 49 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಹಾಗೂ 267 ಅರಣ್ಯ ವೀಕ್ಷಕರಿಗೆ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಈವರೆಗೆ ಸುಮಾರು 333 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, 101 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಒತ್ತುವರಿ ತೆರವಿನ ಬಗ್ಗೆ ಸ್ಪಷ್ಟನೆ ನೀಡಿದ ಈಶ್ವರ ಖಂಡ್ರೆ 2015ರ ನಂತರದ ಒತ್ತುವರಿ ತೆರವು ಮಾಡಲಾಗುತ್ತಿದೆ. ಜೊತೆಗೆ 2015ರ ಸರ್ಕಾರದ ಆದೇಶ ಮತ್ತು ನಡವಳಿಯಂತೆ 3 ಎಕರೆಗಿಂತ ಮೇಲ್ಪಟ್ಟ ದೊಡ್ಡ ಒತ್ತುವರಿ ತೆರವು ಮಾಡಲಾಗುತ್ತಿದ್ದು, ಕಳೆದ ವರ್ಷದಿಂದ ಸುಮಾರು 2500 ಎಕರೆ ಒತ್ತುವರಿ ತೆರವು ಮಾಡಿಸಲಾಗಿದೆ ಎಂದರು.
ಬಡ ರೈತರ ಒತ್ತುವರಿಯನ್ನು (ಪಟ್ಟಾಭೂಮಿ ಮತ್ತು ಒತ್ತುವರಿ ಸೇರಿ 3 ಎಕರೆ) ತೆರವು ಮಾಡಿಸುವುದಿಲ್ಲ ಎಂದು ಪುನರುಚ್ಚರಿಸಿದ ಅವರು, ತಾವು ಸಚಿವರಾದ ತರುವಾಯ ಹೊಸದಾಗಿ 11559 ಎಕರೆ ಭೂಮಿಯನ್ನು ಅಧಿಸೂಚಿತ ಅರಣ್ಯ ಅಥವಾ ಮೀಸಲು ಅರಣ್ಯ ಎಂದು ಘೋಷಿಸಿರುವುದಾಗಿ ತಿಳಿಸಿದರು.
ಅರಣ್ಯ ಇಲಾಖೆಯ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲಾಗಿದ್ದು, ಡಿ.ಆರ್.ಎಫ್.ಓ ವರೆಗಿನ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತಿದೆ, ಬಹು ದಿನಗಳಿಂದ ಬಡ್ತಿ ಸಿಗದೆ ಇದ್ದ ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ, ಅರಣ್ಯ ಇಲಾಖೆಗೆ ಹೊಸ ಲಾಂಛನ ರೂಪಿಸಿ ಬಿಡುಗಡೆ ಮಾಡಲಾಗಿದೆ, ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು 5 ಕೋಟಿ ಗಿಡ ನೆಡುವ ಸಂಕಲ್ಪ ಮಾಡಿ, ಗುರಿ ಮೀರಿದ ಸಾಧನೆಯೊಂದಿಗೆ 5 ಕೋಟಿ 48 ಲಕ್ಷ ಗಿಡ ನೆಟ್ಟು ಜಿಯೋ ಟ್ಯಾಗ್ ಮಾಡಲಾಗಿದೆ. ಅದರ ವಿವರವನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದು ವಿವರ ನೀಡಿದರು.
ಅರಣ್ಯದ ಒತ್ತುವರಿಯೂ ಅವ್ಯಾಹತವಾಗಿದೆ. ಚಿರತೆಗಳು, ನವಿಲುಗಳು ಮತ್ತು ಸರೀಸೃಪಗಳ ಆವಾಸಸ್ಥಾನವಾದ ಬೆಟ್ಟಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಹಲವು ಬೆಟ್ಟ ಗುಡ್ಡಗಳು ನಾಮಾವಶೇಷವಾಗಿವೆ. ಚಿರತೆಗಳು ನಾಡಿಗೆ ಬರುತ್ತವೆ ಎಂದು ಜನ ದೂರುತ್ತಾರೆ. ನವಿಲುಗಳು ತಮ್ಮ ಬೆಳೆ ನಾಶ ಮಾಡುತ್ತವೆ ಎನ್ನುತ್ತಾರೆ. ಬೆಟ್ಟಗುಡ್ಡಗಳಿದ್ದರೆ ಅಲ್ಲಿ ಅವು ಹಾವು ಇತ್ಯಾದಿ ತಿಂದು ಬದುಕುತ್ತವೆ. ಚಿರತೆಗಳು ಬೆಟ್ಟದ ಗುಹೆಗಳಲ್ಲಿ ವಾಸಿಸುತ್ತವೆ. ಹೀಗಾಗಿಯೇ ಮರ ಗಿಡ ಇಲ್ಲದಿದ್ದರೂ ಬೆಟ್ಟಗುಡ್ಡವನ್ನು ಅರಣ್ಯ ಎಂದು ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು.
ಅಕ್ರಮ ಒತ್ತುವರಿ ನಿಗ್ರಹ, ಕಳ್ಳಬೇಟೆ ತಡೆ, ಕಾಡ್ಗಿಚ್ಚು ನಿಯಂತ್ರಣವೇ ಮುಂತಾದ ಹಲವು ಕ್ಲಿಷ್ಟಕರ ಕಾರ್ಯಾಚರಣೆ ಮೂಲಕ ಅರಣ್ಯವನ್ನು ಕಾಪಾಡುತ್ತಿದ್ದಾರೆ. ಇದರ ಜೊತೆಗೆ, ಅರಣ್ಯ ಅಭಿವೃದ್ಧಿ, ಅರಣ್ಯ ಸಂರಕ್ಷಣೆ, ಸಂಶೋಧನೆ, ಕಾರ್ಯಯೋಜನೆ, ತರಬೇತಿ ಮುಂತಾದ ಕ್ಷೇತ್ರಗಳಲ್ಲಿಯೂ ಅರಣ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾವೀನ್ಯಪೂರ್ಣ ಪರಿಹಾರವನ್ನೂ ಒದಗಿಸುತ್ತಿರುವ ಅರಣ್ಯ ಸಿಬ್ಬಂದಿಯನ್ನು ಶ್ಲಾಘಿಸಿದ ಅವರು, ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೊಲೀಸ್ ಕ್ಯಾಂಟೀನ್ ಸೌಲಭ್ಯ ಬಳಸಿಕೊಳ್ಳಲು ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರಣ್ಯದಲ್ಲಿ ಕರ್ತವ್ಯದಲ್ಲಿ ಮೃತ ಪಡುವ ಸಿಬ್ಬಂದಿಗೆ ಪರಿಹಾರ ನೀಡುವ ನಿರ್ಧಾರವನ್ನು 2017ರಲ್ಲಿ ಕೈಗೊಂಡರು. ಹಿಂದೆ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ನಂತರ 30 ಲಕ್ಷಕ್ಕೆ ಹೆಚ್ಚಿಸಲಾಯಿತು, ಈಗ ಮುಖ್ಯಮಂತ್ರಿಯವರು ಆ ಮೊತ್ತವನ್ನು 50 ಲಕ್ಷಕ್ಕೆ ಹೆಚ್ಚಳ ಮಾಡಿದ್ದಾರೆ ಎಂದು ತಿಳಿಸಿದರು.
ಇಂದು ಪದಕ ಪಡೆದ ಅಧಿಕಾರಿ, ಸಿಬ್ಬಂದಿಗಳಿಗೆ ಇದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಶಕ್ತಿ, ಚೈತನ್ಯ ನೀಡುತ್ತದೆ. ಅದೇ ರೀತಿ, ಉಳಿದ ಅಧಿಕಾರಿ, ಸಿಬ್ಬಂದಿಗಳಿಗೆ ಉತ್ತಮ ಕಾರ್ಯ ಮಾಡಲು ಪ್ರೇರಣೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಜ್ಞಾವಿಧಿ ಬೋಧನೆ:
ಇನ್ನು ಇಂದು ಅರಣ್ಯ ಪಡೆಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ 267 ಅರಣ್ಯ ವೀಕ್ಷಕರಿಗೆ ಸ್ವತಃ ಮುಖ್ಯಮಂತ್ರಿಯವರೇ ನೇಮಕಾತಿ ಪತ್ರ ನೀಡುತ್ತಿರುವುದು ವಿಶೇಷವಾಗಿದೆ. ನೀವೆಲ್ಲರೂ ಅದೃಷ್ಟವಂತರು ಎಂದು ಈಶ್ವರ ಖಂಡ್ರೆ ಶ್ರದ್ಧೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತೇನೆ, ಅಕ್ರಮ ಮರ ಕಡಿತಲೆ, ಅರಣ್ಯ ಒತ್ತುವರಿ ಆಗದಂತೆ ಕಣ್ಗಾವಲು ಇಡುತ್ತೇನೆ ಎಂದು ನೂತನ ಅರಣ್ಯ ವೀಕ್ಷಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
2023-24ನೇ ಸಾಲಿನಲ್ಲಿ 310 ಅರಣ್ಯ ವೀಕ್ಷಕರ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು. ಒಟ್ಟು 1,94,007 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಎಸ್.ಎಸ್.ಎಲ್.ಸಿ. ಮತ್ತು ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿದ ಅತಿ ಹೆಚ್ಚು ಅಂಕ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಮೂಲಕ ಪಾರದರ್ಶಕವಾಗಿ 267 ಅರ್ಹ ಅಭ್ಯರ್ಥಿಗಳು ಎಲ್ಲಾ ವೃತ್ತದಿಂದ ಆಯ್ಕೆಯಾಗಿದ್ದಾರೆ. ಕೇವಲ 4 ತಿಂಗಳುಗಳಲ್ಲಿ ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು ಮತ್ತು ಚಿಕ್ಕಮಗಳೂರು ವೃತ್ತದಲ್ಲಿ ಸ್ಥಳೀಯ ಮೂಲ ಆದವಾಸಿ ಜನಾಂಗದ ಅಭ್ಯರ್ಥಿಗಳಿಗೆ ಮೀಸಲಾತಿ ಇದ್ದು, ಈ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸದ ಕಾರಣ ಮತ್ತು ಇನ್ನಿತರ ತಾಂತ್ರಿಕ ಕಾರಣಗಳಿಂದ 43 ಹುದ್ದೆಗಳಿಗೆ ಇಂದು ನೇಮಕಾತಿ ನೀಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಹುದ್ದೆ ಭರ್ತಿ ಮಾಡಿ ನೇಮಕಾತಿ ಪತ್ರ ನೀಡಲಾಗುವುದು.
540 ಗಸ್ತು ಅರಣ್ಯ ಪಾಲಕರ ನೇಮಕಾತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದ್ದು, ಅಕ್ಟೋಬರ್ ನಲ್ಲಿ ಪರೀಕ್ಷೆ ನಡೆಸಿ ನವೆಂಬರ್ ಹೊತ್ತಿಗೆ ಗಸ್ತು ಅರಣ್ಯ ಪಾಲಕರ ಹುದ್ದೆಗೆ ನೇಮಕಗೊಂಡವರಿಗೂ ನೇಮಕಾತಿ ಪತ್ರ ನೀಡಲಾಗುವುದು. ಇದಲ್ಲದೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕೂಡ 152 ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ ಎಂದರು.
ಅರಣ್ಯ ವೀಕ್ಷಕರಾಗಿ ಆಯ್ಕೆಯಾಗಿರುವ ನಿಮ್ಮ ಮೇಲೆ ಜವಾಬ್ದಾರಿ ಇದೆ. ನೀವು ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾದ ಬಳಿಕ, ನಿಮ್ಮ ವಲಯದಲ್ಲಿ ಎಲ್ಲೇ ಒತ್ತುವರಿ ನಡೆದರೂ, ಅಕ್ರಮ ಕಡಿತಲೆ ನಡೆದರೂ ಅದರ ಮೇಲೆ ನಿಗಾ ಇಡಬೇಕು, ಕಳ್ಳಬೇಟೆಗೆ ಅವಕಾಶ ಇಲ್ಲದಂತೆ ಕಣ್ಗಾವಲು ಮಾಡಬೇಕು. ಸ್ಥಳೀಯ ಜನರೊಂದಿಗೆ ಸೌಹಾರ್ದತೆಯಿಂದ, ಸ್ನೇಹಪರವಾಗಿದ್ದು, ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಸಂಪತ್ತನ್ನು ರಕ್ಷಿಸಲು ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಮಾಡಿ, ನೀವೂ ಪ್ರಶಸ್ತಿಗೆ ಭಾಜನರಾಗಿ ಎಂದು ಕಿವಿ ಮಾತು ಹೇಳಿದರು.
ಮಾನವ-ವನ್ಯಜೀವಿ ಸಂಘರ್ಷ:
ರಾಜ್ಯ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳಿಂದ ಆನೆ ದಾಳಿಯಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಆಗದಂತೆ ನಿಯಂತ್ರಿಸಲಾಗುತ್ತಿದೆ. ಆದಾಗ್ಯೂ ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 50 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಇಲ್ಲಿಯವರೆಗೆ 24 ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ ಇದು ಅತ್ಯಂತ ನೋವಿನ ಸಂಗತಿ.
ಕಳೆದ ವರ್ಷ ಅಂದರೆ 2023-24ರಲ್ಲಿ 65 ಜನರು ಮೃತಪಟ್ಟಿದ್ದರು. ಅದರ ಹಿಂದಿನ ವರ್ಷ 53 ಜನರು ಮೃತಪಟ್ಟಿದ್ದರು.
ಮಾನವ-ವನ್ಯಜೀವಿ ಸಂಘರ್ಷದಲ್ಲಿ, ಮಾನವ-ಆನೆ ಸಂಘರ್ಷವೇ ದೊಡ್ಡ ಸವಾಲು. ಹೆಚ್ಚುತ್ತಿರುವ ಮಾನವ ಜನಸಂಖ್ಯೆ, ಕಾಡಿನಂಚಿನವರೆಗೆ ವಿಸ್ತರಿಸುತ್ತಿರುವ ಕೃಷಿ ಚಟುವಟಿಕೆಗಳು ಮತ್ತು ವಸತಿ ಬಡಾವಣೆ ನಿರ್ಮಾಣ ಮಾನವ-ಆನೆ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿಯೇ ನಮ್ಮ ಇಲಾಖೆ ಕಳೆದ ಆಗಸ್ಟ್ ನಲ್ಲಿ ಆನೆ-ಮಾನವ ಸಂಘರ್ಷ ನಿರ್ವಹಣೆ ಕುರಿತಂತೆ ಅಂತಾರಾಷ್ಟ್ರೀಯ ಸಮ್ಮೇಳನವನ್ನೇ ಆಯೋಜಿಸಿತ್ತು. ಜೊತೆಗೆ ಕೇರಳ, ತಮಿಳುನಾಡು ಅರಣ್ಯ ಸಚಿವರೊಂದಿಗೆ ಉನ್ನತ ಮಟ್ಟದ ಸಭೆಯನ್ನೂ ನಡೆಸಲಾಗಿದೆ. ಇತ್ತೀಚೆಗೆ ಆಂಧ್ರಪ್ರದೇಶದ ಅರಣ್ಯ ಸಚಿವ ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೂ ರಾಜ್ಯಕ್ಕೆ ಭೇಟಿ ನೀಡಿ ನಮ್ಮ ಅರಣ್ಯ ಸಂರಕ್ಷಣೆ ಮತ್ತು ಹಸಿರು ಹೊದಿಕೆ ಹೆಚ್ಚಳ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದರು.
ಅದೇ ರೀತಿ ಜಾಗತಿಕ ತಾಪಮಾನ ತಗ್ಗಿಸಲು ಮುಂದಿನ ವರ್ಷ ಅರಣ್ಯ ಇಲಾಖೆಯಿಂದ 10 ಕೋಟಿ ಸಸಿ ನೆಟ್ಟು ಬೆಳೆಸಲು ತೀರ್ಮಾನಿಸಲಾಗಿದ್ದು, ಇದಕ್ಕೂ ಹೆಚ್ಚಿನ ಅನುದಾನ ನೀಡಲು ಕೋರುತ್ತಿದ್ದೇನೆ. ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ವಿವಿಧ ಯೋಜನೆಗಳಡಿಯಲ್ಲಿ ಅರಣ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. 2024-25ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಂದ ಸುಮಾರು 44,5೦೦ ಹೆಕ್ಟೇರ್ ನೆಡುತೋಪು ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕ ಮತ್ತು ರೈತರಿಗೆ ವಿತರಿಸಲು ಸುಮಾರು 2.5 ಕೋಟಿ ಸಸಿಗಳನ್ನು ಬೆಳೆಸಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಗುರಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ನಗರ ಕಳೆದ 1೦ ವರ್ಷಗಳಲ್ಲಿ ಬೆಂಗಳೂರು ನಗರವು 05 ಚದರ ಕಿಲೋಮೀಟರ್‌ನಷ್ಟು ಹಸಿರು ಹೊದಿಕೆಯನ್ನ ಕಳೆದುಕೊಂಡಿದೆ. ಮತ್ತೆ ಬೆಂಗಳೂರು ನಗರಕ್ಕೆ ಉದ್ಯಾನ ನಗರಿ ಎಂಬ ಖ್ಯಾತಿ ತರುವ ಪ್ರಯತ್ನ ಆಗಬೇಕು. ಇಲ್ಲಿನ ಹಸಿರು ಹೊದಿಕೆ ಹೆಚ್ಚಬೇಕು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೂ ಕೈಜೋಡಿಸಬೇಕಾದ ಅಗತ್ಯವಿದೆ. ನಾವೆಲ್ಲರೂ ಸೇರಿ ಬೆಂಗಳೂರಿನಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ರೀತಿಯಲ್ಲಿ ದೊಡ್ಡ ಉದ್ಯಾನಗಳನ್ನು ನಿರ್ಮಿಸಬೇಕಾಗಿದೆ. ಎಚ್.ಎಂ.ಟಿ.ಯ ಬಳಿ ಇರುವ ಅರಣ್ಯ ಭೂಮಿಯನ್ನು ಮರಳಿ ಪಡೆದು ಅಲ್ಲಿ ಲಾಲ್ ಭಾಗ್ ಮಾದರಿಯಲ್ಲಿ ಉದ್ಯಾನ ನಿರ್ಮಿಸುವ ಯೋಜನೆ ಇದೆ ಎಂದರು.
BMTC ಬಸ್ಸಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ: 2,778 ಪ್ರಕರಣ ಪತ್ತೆ, 5.58 ಲಕ್ಷ ದಂಡ ವಸೂಲಿ
BIG NEWS : ಏನ್ರಿ ಮೀಡಿಯಾ?…ಎಂದಿದ್ದ ಕೊಲೆ ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ಟಿವಿ ಬೇಕೆ ಬೇಕಂತೆ!