ಬೆಂಗಳೂರು: ಐತಿಹಾಸಿಕ ಶಕ್ತಿ ದೇವತೆ ಹಾಸನಾಂಬೆ ಸನ್ನಿಧಿಯಲ್ಲಿ ಈ ವರ್ಷ ಸಾರ್ವಜನಿಕರ ದರ್ಶನದ ಸಂಖ್ಯೆ ಹೊಸ ದಾಖಲೆ ಬರೆದಿದೆ. ಕಳೆದ 13 ದಿನಗಳಲ್ಲಿ ಬರೋಬ್ಬರಿ 26 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಶಕ್ತಿ ದೇವತೆಯ ದರ್ಶನ ಪಡೆದಿದ್ದಾರೆ. ಈ ಭಾರಿ ಜನಸಾಗರಕ್ಕೆ ಮುಖ್ಯ ಕಾರಣ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆ’ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಆಗಿರುವ ದಿನೇಶ್ ಗೂಳಿಗೌಡ ಬಣ್ಣಿಸಿದ್ದಾರೆ.
ಮಹಿಳಾ ಭಕ್ತರು ಅಪಾರ-ಇದು ಶಕ್ತಿ ಯೋಜನೆ ಎಫೆಕ್ಟ್:
ರಾಜ್ಯ ಸರ್ಕಾರವು ಘೋಷಿಸಿದ ಪಂಚ ಗ್ಯಾರಂಟಿಗಳ ಪೈಕಿ ಒಂದಾದ ‘ಶಕ್ತಿ’ ಯೋಜನೆ ಜಾರಿಯಾದ ನಂತರ, ರಾಜ್ಯದ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದು, ಇದು ಎಲ್ಲ ಧಾರ್ಮಿಕ ಕೇಂದ್ರಗಳ ಆದಾಯ ಮತ್ತು ಭಕ್ತರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇದಕ್ಕೆ ಈಗ ಹಾಸನಾಂಬೆಯ ದರ್ಶನವೇ ಸಾಕ್ಷಿ. ಪ್ರತಿ ವರ್ಷ ಹಾಸನಾಮಿ ದರ್ಶನಕ್ಕೆ ನಾಲ್ಕರಿಂದ ಐದು ಲಕ್ಷ ಜನರಷ್ಟೇ ಸೇರುತ್ತಿದ್ದರು. ಆದರೆ ರಾಜ್ಯ ಸರ್ಕಾರ ಉಚಿತವಾಗಿ ಬಸ್ ಪ್ರಯಾಣವನ್ನು ಮಹಿಳೆಯರಿಗೆ ನೀಡಿದ್ದರಿಂದ ಈಗ ಅವರು ಸಹ ಪ್ರವಾಸಿ ತಾಣಗಳ ಸಹಿತ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಶಕ್ತಿಯು ಉಚಿತ ಯೋಜನೆಯಾಗಿರದೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುತ್ತಾ, ಆರ್ಥಿಕವಾಗಿ ಸಬಲತೆಯನ್ನು ಸಾಧಿಸುವತ್ತ ಹೆಜ್ಜೆ ಇಟ್ಟಿದೆ ಎಂದು ದಿನೇಶ್ ಗೂಳಿಗೌಡ ಹೇಳಿದರು.
ಶಾಸಕರು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಆಗಿರುವ ದಿನೇಶ್ ಗೂಳಿಗೌಡರವರು ಈ ಕುರಿತು ಮಾತನಾಡುತ್ತಾ, “ಹಾಸನಾಂಬೆಯಂತಹ ಪವಿತ್ರ ಶಕ್ತಿದೇವತೆಗಳ ದರ್ಶನಕ್ಕೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ನಾಯಕರು ಕೈಗೊಂಡಿರುವ ಪಂಚ ಗ್ಯಾರಂಟಿ ನಿರ್ಧಾರದ ಫಲವಾಗಿದೆ. ಈ ಯೋಜನೆಯಿಂದ ರಾಜ್ಯದ ಜನತೆಗೆ, ವಿಶೇಷವಾಗಿ ಮಹಿಳೆಯರಿಗೆ ಬಹಳ ದೊಡ್ಡ ಅನುಕೂಲವಾಗಿದೆ. ಸರ್ಕಾರ ಜಾರಿಗೆ ತಂದ ‘ಶಕ್ತಿ’ ಮಹಿಮೆ ಇಂದು ಹಾಸನಾಂಬೆ ಸನ್ನಿಧಿಯಲ್ಲಿ ಕಂಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ನನ್ನ ಅಭಿನಂದನೆಗಳು” ಎಂದು ಹರ್ಷ ವ್ಯಕ್ತಪಡಿಸಿದರು.
ದಾಖಲೆ ಸಂಖ್ಯೆ ಹಾಗೂ ಆದಾಯ:
ದೇವಾಲಯದ ಆಡಳಿತ ಮಂಡಳಿ ನೀಡಿದ ಮಾಹಿತಿ ಪ್ರಕಾರ, ಕಳೆದ 13 ದಿನಗಳಲ್ಲಿ ಒಟ್ಟು 26,06,691 ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ಇದು ಹಿಂದಿನ ವರ್ಷಕ್ಕೆ (2024ರಲ್ಲಿ 17,47,240 ಭಕ್ತರು) ಹೋಲಿಸಿದರೆ ಶೇ. 49ಕ್ಕಿಂತ ಹೆಚ್ಚು ಭಕ್ತರ ಹೆಚ್ಚಳವಾಗಿದೆ. ದಾಖಲೆಯ ಭಕ್ತರ ಆಗಮನದಿಂದಾಗಿ ದೇವಾಲಯಕ್ಕೆ ಈ ವರ್ಷ 22 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ ಎಂದು ತಿಳಿಸಿದರು.
ಸುರಕ್ಷತೆ ಮತ್ತು ಗಣ್ಯರ ಭೇಟಿ:
ದರ್ಶನದ ಕೊನೆಯ ದಿನವಾದ ಬುಧವಾರ ಲಕ್ಷಾಂತರ ಭಕ್ತರು ದರ್ಶನ ಪಡೆದರು. ಇಷ್ಟು ದೊಡ್ಡ ಸಂಖ್ಯೆಯ ಭಕ್ತರನ್ನು ನಮ್ಮ ಸರ್ಕಾರ ನಿಭಾಯಿಸಿದೆ. ಕಾನೂನು ಸುವ್ಯವಸ್ಥೆ ಮತ್ತು ವ್ಯವಸ್ಥೆಗಳನ್ನು ಪರಿಶೀಲಿಸಿರುವುದು ನಮ್ಮ ಕಾಂಗ್ರೆಸ್ ಸರ್ಕಾರದ ಬದ್ದತೆಯನ್ನು ತೋರಿಸುತ್ತದೆ ಎಂದು ದಿನೇಶ್ ಗೂಳಿಗೌಡ ಅವರು ಹೇಳಿದರು.
ಕಳೆದ 13 ದಿನಗಳ ದರ್ಶನದ ಅವಧಿಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಟರಾದ ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಮತ್ತು ಸಿನಿಮಾ ತಾರೆಯರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ಇಷ್ಟಾದರೂ ಸಹ ಸಾಮಾನ್ಯ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಣೆಯನ್ನು ನಮ್ಮ ಸರ್ಕಾರ ಮಾಡಿದೆ ಎಂದು ದಿನೇಶ್ ಗೂಳಿಗೌಡ ಅವರು ತಿಳಿಸಿದರು.
ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣದ ವಿಚಾರವಾಗಿ 2-3 ದಿನಗಳಲ್ಲಿ ಎಎಐ ವರದಿ ನೀಡಲಿದೆ: ಸಚಿವ ಎಂ.ಬಿ.ಪಾಟೀಲ
ನ.18ರಿಂದ 3 ದಿನ `ಬೆಂಗಳೂರು ಟೆಕ್ ಸಮ್ಮಿಟ್-2025’ ಆಯೋಜನೆ : CM ಸಿದ್ದರಾಮಯ್ಯ ಮಾಹಿತಿ