ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವಂತ ಮಳೆಯಿಂದಾಗಿ 600 ಕುಟುಂಬಗಳ 2500 ಜನರು ಸಂತ್ರಸ್ತರಾಗಿದ್ದಾರೆ. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಕಾಳಜಿ ಕೇಂದ್ರಗಳಲ್ಲಿ ಇರಿಸಿ, ತಾತ್ಕಾಲಿಕ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ.
ಇಂದು ಮುಖ್ಯಮಂತ್ರಿ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ನಗರದ ಯಲಹಂಕ, ಮಹದೇವಪುರ, ದಾಸರಹಳ್ಳಿ ವಲಯದಲ್ಲಿ ಕಳೆದ 72 ಗಂಟೆಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದ ಕೆರೆಗಳೆಲ್ಲಾ ತುಂಬಿ ಕೋಡಿಯಲ್ಲಿ ಹೆಚ್ಚು ನೀರು ಹರಿದು ರಾಜಕಾಲುವೆಗಳಿಗೆ ಬರುತ್ತಿರುವ ಕಾರಣ, ವಿವಿಧ ಪ್ರದೇಶಗಳು ಜಲಾವೃತವಾಗಿರುತ್ತದೆ. ಚೌಡೇಶ್ವರಿ ನಗರದಲ್ಲಿ 160 ಮಿ.ಮೀ ಮಳೆಯಾಗಿದ್ದು, ಇದು ಇತಿಹಾಸದಲ್ಲಿಯೇ ಅತಿಹೆಚ್ಚು ಮಳಎಯಾಗಿರುತ್ತದೆ ಎಂದಿದೆ.
ಬೆಂಗಳೂರಲ್ಲಿ ಅಕ್ಟೋಬರ್ ತಿಂಗಳಲ್ಲಿ 245 ಮಿ.ಮೀ ಮಳೆಯಾಗಿದ್ದು, ಇದು ಅತಿ ಹೆಚ್ಚು ಮಳೆಯಾಗಿರುವ ಪೈಕಿ ನಾಲ್ಕನೇ ಮಳೆಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು, ನಿರ್ವಹಿಸಲು ಮತ್ತು ಯಾವುದೇ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಪಾಲಿಕೆ, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಅಗ್ನಿಶಾಮಕ ದಳದ ತಂಡಗಳು 24×7 ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.
ನಗರದಲ್ಲಿ ಮಳೆಯಿಂದಾಗಿ 1079 ಮನೆಗಳಿಗೆ ನೀರು ನುಗ್ಗಿದ್ದರೇ, 30 ಪ್ರದೇಶಗಳಲ್ಲಿ ನೀರು ನಿಂತಿವೆ. ಮಳೆಯಿಂದ 199 ಮರ ಹಾಗೂ ರೆಂಪೆ-ಕೊಂಬೆಗಳು ಮುರಿದು ಬಿದ್ದಿದ್ದಾವೆ. ಇವುಗಳನ್ನು ಪರಿಹರಿಸಲು 30 ಅರಣ್ಯ ವಿಭಾಗದ ತಂಡಗಳು, 1 ಬೆಟಾಲಿಯನ್ ಎನ್ ಡಿ ಆರ್ ಎಫ್, 3 ಎಸ್ ಡಿ ಆರ್ ಎಫ್, 5 ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಬಿಬಿಎಂಪಿಯಿಂದ 30 ತಂಡಗಳು, 16 ಬೋಟ್ ಗಳು ನೆರೆ ಸಮಸ್ಯೆ ಪರಿಹಾರದಲ್ಲಿ ತೊಡಗಿದ್ದಾವೆ ಎಂದು ತಿಳಿಸಿದೆ.
ಭಾರೀ ಮಳೆಯಿಂದಾಗಿ 600 ಕುಟುಂಬಸ್ಥರ 2500 ನಿವಾಸಿಗಳು ಸಂತ್ರಸ್ಥರಾಗಿದ್ದಾರೆ. ಅವರನ್ನು ಕೇಂದ್ರಿಯ ವಿಹಾರಕ್ಕೆ ಸ್ಥಳಾಂತರಿಸಲಾಗಿದೆ. 5 ಲೀಟರ್ ಸಾಮರ್ಥ್ಯದ 3500 ಬಾಟೆಲ್ ಗಳನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಲಾಗತ್ತಿದೆ. 1000 ಲೀಟರ್ ಹಾಲು, 2000 ಬಿಸ್ಕೆಟ್ ಪ್ಯಾಕೇಟ್, 1000 ತಿಂಡಿ ಪ್ಯಾಕೇಟ್, 66000 ಊಟದ ಪ್ಯಾಕೆಟ್ ವಿತರಿಸಲಾಗುತ್ತಿದೆ. ಯಲಹಂಕ ವಲಯದ 4 ಪ್ರದೇಶಗಳನ್ನು ಹೊರತುಪಡಿಸಿ ಬೇರೆಡೆ ಸಮಸ್ಯೆ ಬಗೆಹರಿಸಲಾಗಿರುತ್ತದೆ ಎಂದು ಸಿಎಂ ಕಚೇರಿ ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ನಿಷೇಧಿತ ಪಟಾಕಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ: ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ