ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಬರುವ 82 ಹಳ್ಳಿಗಳಲ್ಲಿ ಶನಿವಾರ 3ನೇ ವಿದ್ಯುತ್ ಅದಾಲತ್ ನಡೆಯಿತು. ವಿದ್ಯುತ್ ಅದಾಲತ್ ನಲ್ಲಿ 2500 ಗ್ರಾಹಕರು ಭಾಗವಹಿಸಿ, ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಬೆಸ್ಕಾಂ ಅಧಿಕಾರಿಗಳ ಗಮನ ಸೆಳೆದರು.
ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ ಅವರು ದಾವಣಗೆರೆಯ ಕುಕ್ಕುವಾಡ ಗ್ರಾಮದಲ್ಲಿ ನಡೆದ ಅದಾಲತ್ ನಲ್ಲಿ ಪಾಲ್ಗೊಂಡಿದ್ದರು. ಗ್ರಾಹಕರ ಬಿಲ್ಲಿಂಗ್, ವಿದ್ಯುತ್ ಸಂಪರ್ಕ, ಮಾಪನ ಸಂಬಂಧಿತ ದೂರುಗಳನ್ನು ವ್ಯವಸ್ಥಾಪಕ ನಿರ್ದೇಶಕರು ಆಲಿಸಿ ಪರಿಹಾರಕ್ಕೆ ಸೂಚಿಸಿದರು. ಹಾಗೆಯೇ ಬೆಸ್ಕಾಂನ ನಿರ್ದೇಶಕರು (ತಾಂತ್ರಿಕ) ಡಿ.ನಾಗಾರ್ಜುನ ಅವರು ಮೊಣಕಾಲ್ಮೂರು ತಾಲೂಕಿನ ಕಣಕುಟ್ಟೆ ಗ್ರಾಮದಲ್ಲಿ ನಡೆದ ಅದಾಲತ್ ನಲ್ಲಿ ಭಾಗವಹಿಸಿದ್ದರು, ಗ್ರಾಮೀಣ ಭಾಗದ ಗ್ರಾಹಕರಿಂದ ಸ್ವೀಕರಿಸಿರುವ 824 ಮನವಿಗಳ ಪೈಕಿ 250 ಮನವಿಗಳಿಗೆ ಬೆಸ್ಕಾಂನ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಿದ್ದು, ಇನ್ನುಳಿದ 574 ಮನವಿಗಳನ್ನು ವಿಲೇವಾರಿಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ ಎಂದು ಬೆಸ್ಕಾಂನ ಪ್ರಕಟಣೆ ತಿಳಿಸಿದೆ.
ವಿದ್ಯುತ್ ಅದಾಲತ್ ಕಾರ್ಯಕ್ರಮ ಪ್ರತಿ ತಿಂಗಳ 3ನೇ ಶನಿವಾರದಂದು ಆಯೋಜಿಸಲಾಗುತ್ತಿದ್ದು, ಗ್ರಾಮೀಣ ಭಾಗದ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ನೀಡುತ್ತಿದ್ದಾರೆ.
ಗ್ರಾಮೀಣ ಭಾಗದ ಗ್ರಾಹಕರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳಾದ ಅಸಮರ್ಪಕ ವಿದ್ಯುತ್ ಪೂರೈಕೆ, ವಾಲಿರುವ ವಿದ್ಯುತ್ ಕಂಬಗಳು, ನೀರಾವರಿ ವಿದ್ಯುತ್ ಸಂಪರ್ಕ, ಮಾಪನ, ಬಿಲ್ಲಿಂಗ್ , ಟಿಸಿ ಬದಲಾವಣೆ. ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯವನ್ನು ವಿದ್ಯುತ್ ಅದಾಲತ್ ನಲ್ಲಿ ಮಾಡಲಾಗುತ್ತಿದೆ.
ವಿದ್ಯುತ್ ಅದಾಲತ್ ನಲ್ಲಿ ಗ್ರಾಹಕರಿಗೆ ಬೆಸ್ಕಾಂನ ವಿದ್ಯುತ್ ಸೇವೆಗಳ ಬಗ್ಗೆ ಅರಿವು ಮೂಡಿಸಲಾಗುತಿದ್ದು, ಎಸ್ಸಿ- ಎಸ್ಪಿ ಗ್ರಾಹಕರಿಗೆ 75 ಯೂನಿಟ್ ಉಚಿತ ವಿದ್ಯುತ್ , ಕೈಗಾರಿಕೆ ಘಟಕಗಳಿಗೆ ರಿಯಾಯಿತಿ ದರದ ವಿದ್ಯುತ್ ಸೇವೆಗಳು ಮತ್ತು ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ವಾಟ್ಸ್ ಆಪ್ ಸಹಾಯವಾಣಿ ಕುರಿತು ಅದಾಲತ್ ನಲ್ಲಿ ಅರಿವು ಮೂಡಿಸಲಾಯಿತು.
BIGG NEWS: ಇಯರ್ ಫೋನ್ ಹಾಕಿಕೊಂಡು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ಮೂವರು ಸಾವು
ಜೂನ್ 18 ಮತ್ತು ಜುಲೈ 16 ನಡೆದ ವಿದ್ಯುತ್ ಅದಾಲತ್ ಗಳಲ್ಲಿ 6571 ಗ್ರಾಹಕರು ಭಾಗಿಯಾಗಿ ಒಟ್ಟು 2187 ಮನವಿಗಳನ್ನು ಸಲ್ಲಿಸಿದ್ದರು. 651 ಮನವಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗಿದೆ. ಇನ್ನುಳಿದ 1536 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಲಾಗಿತ್ತು, ಇವುಗಳಲ್ಲಿ ಹೆಚ್ಚಿನ ಮನವಿಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.