ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ರೆನೇಡ್ ದಾಳಿ ಹಾಗೂ ಪ್ರಮುಖ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ಗಳನ್ನು ದೆಹಲಿ ಪೊಲೀಸರ ವಿಶೇಷ ಘಟಕ (Special Cell) ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ದೆಹಲಿಯಲ್ಲಿ ನಡೆಯಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಬಂಧಿತರನ್ನು ಗ್ವಾಲಿಯರ್ ಮೂಲದ ರಾಜವೀರ್ (21) ಮತ್ತು ವಿವೇಕ್ ಬಂಜಾರ (19) ಎಂದು ಗುರುತಿಸಲಾಗಿದೆ. ಇವರು ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಮತ್ತು ಐಎಸ್‌ಐ ಏಜೆಂಟ್ ಆಗಿರುವ ಶಹಜಾದ್ ಭಟ್ಟಿಯ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಇಬ್ಬರೂ ಶಂಕಿತರು ದೆಹಲಿ-ಎನ್‌ಸಿಆರ್ ವಲಯದ ಪ್ರಮುಖ ಹೋಟೆಲ್‌ಗಳು ಮತ್ತು ಜನನಿಬಿಡ ಸ್ಥಳಗಳ ಮೇಲೆ ಗ್ರೆನೇಡ್ ದಾಳಿ ನಡೆಸಲು ಹಾಗೂ ಗುಂಡಿನ ದಾಳಿ ನಡೆಸಲು ತಯಾರಿ ನಡೆಸುತ್ತಿದ್ದರು.
ಬಂಧಿತರಿಂದ ಒಂದು ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ದೇಶವಿರೋಧಿ ಸಂಚಿಗೆ ಸಂಬಂಧಿಸಿದ ವೀಡಿಯೋ ಹಾಗೂ ಆಡಿಯೋ ಸಂದೇಶಗಳಿರುವ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆಯ ಪ್ರಕಾರ, ಈ ಯುವಕರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಐಎಸ್‌ಐ ಹ್ಯಾಂಡ್ಲರ್‌ಗಳು ಸೆಳೆದಿದ್ದರು. ಹಣದ ಆಸೆ ತೋರಿಸಿ ಅವರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು.








