ಮಾಸ್ಕೋ: ರಷ್ಯಾದ ಕೊಸ್ಟ್ರೋಮಾ ನಗರದ ಕೆಫೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಹದಿಮೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. “ಪ್ರಾಥಮಿಕ ಮಾಹಿತಿಯ ಪ್ರಕಾರ, 13 ಜನರು ಬೆಂಕಿಗೆ ಬಲಿಯಾಗಿದ್ದಾರೆ” ಎಂದು ಸ್ಥಳೀಯ ಗವರ್ನರ್ ಸೆರ್ಗಿ ಸಿಟ್ನಿಕೋವ್ ಟೆಲಿಗ್ರಾಮ್ನಲ್ಲಿ ತಿಳಿಸಿದ್ದಾರೆ.
ಮಾಸ್ಕೋದಿಂದ ಈಶಾನ್ಯಕ್ಕೆ 300 ಕಿಲೋಮೀಟರ್ (180 ಮೈಲಿ) ದೂರದಲ್ಲಿರುವ ನಗರದಲ್ಲಿ ರಾತ್ರಿ ವೇಳೆ ಬೆಂಕಿ ಕಾಣಿಸಿಕೊಂಡಾಗ ಕಟ್ಟಡದಿಂದ 250 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. “ಪೊಲಿಗಾನ್” ಎಂದು ಕರೆಯಲ್ಪಡುವ ಕೆಫೆಯಲ್ಲಿ ಬೆಳಿಗ್ಗೆ 07:30 ರ ಸುಮಾರಿಗೆ (0430 ಜಿಎಂಟಿ) ಬೆಂಕಿಯನ್ನು ಆರಿಸಲಾಯಿತು ಎಂದು ಸಿಟ್ನಿಕೋವ್ ಹೇಳಿದ್ದಾರೆ. ಕನಿಷ್ಠ ಐದು ಜನರು ಗಾಯಗೊಂಡಿದ್ದಾರೆ, ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಅವರು ಇದೇ ವೇಳೆ ಹೇಳಿದರು.