ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಮಳೆ ಮತ್ತು ಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಬಿರುಬೇಸಿಗೆಯ ತಾಪಕ್ಕೆ ತತ್ತರಿಸಿದ್ದ ಜನರಿಗೆ ಮಳೆ ತಂಪೆರೆಯುವ ಬದಲು ಮೃತ್ಯುವಾಗಿ ಕಾಡಿದೆ. ಗಾಳಿ ಸಹಿತ ಸುರಿದ ಈ ಮಳೆಗೆ ನಗರದಾದ್ಯಂತ ಅನಾಹುತಗಳ ಸರಮಾಲೆಯೇ ಸೃಷ್ಟಿಯಾಗಿದೆ.
ಪ್ರಸನ್ನ ಚಿತ್ರಮಂದಿರದಲ್ಲಿ ಅನಾಹುತ: ವಿಷ್ಣುವರ್ಧನ್ ಕಟೌಟ್ ಪತನ
ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಭಾರೀ ಅನಾಹುತವೊಂದು ಸಂಭವಿಸಿದೆ. ಇತ್ತೀಚೆಗಷ್ಟೇ ಮರುಬಿಡುಗಡೆಯಾಗಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಕೋಟಿಗೊಬ್ಬ’ ಚಿತ್ರದ ಸಂಭ್ರಮಕ್ಕಾಗಿ ಅಭಿಮಾನಿಗಳು ಸುಮಾರು 101 ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸಿದ್ದರು.
ಆದರೆ, ಗಾಳಿಯ ವೇಗಕ್ಕೆ ತಡೆದುಕೊಳ್ಳಲಾಗದ ಕಟೌಟ್, ಅದನ್ನು ಹಿಡಿದಿಟ್ಟಿದ್ದ ಮರದ ಪಕ್ಕಾಸುಗಳ ಸಮೇತ ನೆಲಕ್ಕೆ ಉರುಳಿದೆ. ಕಟೌಟ್ ಕೆಳಗೆ ನಿಲ್ಲಿಸಲಾಗಿದ್ದ ಎರಡು ಆಟೋಗಳು ಮರದ ತುಂಡುಗಳ ಅಡಿಯಲ್ಲಿ ಸಿಲುಕಿ ಸಂಪೂರ್ಣ ಜಖಂಗೊಂಡಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಈ ಭೀಕರ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೌರಿಂಗ್ ಆಸ್ಪತ್ರೆ ದುರಂತ: ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಏಳು ಮಂದಿ ದುರ್ಮರಣ ಹೊಂದಿದ್ದಾರೆ. ಬಿರುಗಾಳಿಯ ಆರ್ಭಟಕ್ಕೆ ನಗರದ ವಿವಿಧೆಡೆ ಸುಮಾರು 170 ಮರಗಳು ನೆಲಕ್ಕುರುಳಿವೆ.ತಗ್ಗು ಪ್ರದೇಶದ ಸುಮಾರು 68 ಬಡಾವಣೆಗಳು ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಗಳು ಕೆರೆಯಂತಾಗಿವೆ.
ವಾಹನ ಸವಾರರ ಪರದಾಟ
ಹಠಾತ್ ಸುರಿದ ಮಳೆಯಿಂದಾಗಿ ಸಂಜೆ ಕಚೇರಿಯಿಂದ ಮನೆಗೆ ಮರಳುತ್ತಿದ್ದ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸಿದರು. ರಸ್ತೆಗಳ ಮೇಲೆ ಮರಗಳು ಬಿದ್ದಿದ್ದರಿಂದ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಒಣಗಿದ್ದ ಮರಗಳು ಗಾಳಿಗೆ ಬಿದ್ದ ಕಾರಣ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಹತ್ತಾರು ಕಾರು ಮತ್ತು ಬೈಕ್‌ಗಳು ಹಾನಿಗೊಳಗಾಗಿವೆ.
ನಗರದ ಪಾಲಿಕೆ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳವು ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.








