ಮುಂಬೈ : ಭಾರತದ ಅತೀ ಉದ್ದನೆಯ ಸಾಗರ ಸೇತುವೆ(ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್)ಯನ್ನು ಪ್ರದಾನಿ ನರೇಂದ್ರ ಮೋದಿ ಜನವರಿ 12 ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೊಳ್ಳಲಿದೆ.
ದಕ್ಷಿಣ ಮುಂಬೈನಿಂದ ನವ ಮುಂಬೈವರೆಗೆ ಸಮುದ್ರದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದ್ದು, ಇದು ಬರೋಬ್ಬರಿ 21.8 ಕಿಲೋ ಮೀಟರ್ ಉದ್ದದ ಸೇತುವೆಯಾಗಿದೆ. ಈ ಮೂಲಕ ಎರಡು ಗಂಟೆಗಳ ಪ್ರಯಾಣವನ್ನು ಇನ್ನು ಕೇವಲ 15-20 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ ಎಂದು ವರದಿ ತಿಳಿಸಿದೆ.
ಸೇತುವೆ ಉದ್ಘಾಟನೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಹಿತಿ ನೀಡಿದ್ದು, ಈ ಅತೀ ಉದ್ದನೆಯ ಸೇತುವೆ ಉದ್ಘಾಟನೆಯಿಂದ ಮುಂಬೈನ ಆರ್ಥಿಕ ಅಭಿವೃದ್ಧಿ ಹಾಗೂ ಈ ಭಾಗವನ್ನು ಸಂಪರ್ಕಿಸುವ ಪ್ರದೇಶಗಳು ಅಭಿವೃದ್ಧಿ ಹೊಂದಲು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.
ಈ ಸೇತುವೆಗೆ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಸೇವಾ ಅಟಲ್ ಸೇತು ಎಂದು ಹೆಸರಿಡಲಾಗಿದ್ದು, ಇದಕ್ಕೆ 21,000 ಸಾವಿರ ಕೋಟಿ ರೂಪಾಯಿ ವೆಚ್ಚವಾಗಿದೆ. ಇದರಲ್ಲಿ 15000 ಸಾವಿರ ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿದೆ ಎಂದು ಶಿಂಧೆ ತಿಳಿಸಿದರು. ಸೇತುವೆಯಿಂದಾಗಿ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಸಮಯ, ಇಂಧನ ಉಳಿತಾಯವಾಗಲಿದೆ. ಅಟಲ್ ಸೇತುವೆಯಲ್ಲಿ ನಾಲ್ಕು ಚಕ್ರದ ವಾಹನಗಳ ವೇಗದ ಮಿತಿ 100 ಕಿಲೋ ಮೀಟರ್. ಆದರೆ ಮೋಟಾರ್ ಬೈಕ್, ಆಟೋ ರಿಕ್ಷಾ ಮತ್ತು ಟ್ರ್ಯಾಕ್ಟರ್ ಗಳಿಗೆ ಈ ಸೇತುವೆ ಮೇಲೆ ಸಂಚರಿಸಲು ಅನುಮತಿ ಇಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಕಾರು, ಲಘು ವಾಹನಗಳು, ಮಿನಿ ಬಸ್ ಗಳು ಮತ್ತು ಎರಡು ಎಕ್ಸೆಲ್ ಬಸ್ ಗಳ ವೇಗದ ಮಿತಿ ಕೂಡಾ ಗಂಟೆಗೆ 100 ಕಿಲೋ ಮೀಟರ್. ಅದೇ ರೀತಿ ಸೇತುವೆಯ ಆರಂಭ ಮತ್ತು ಸೇತುವೆಯ ಕೊನೆಯ ಭಾಗದಲ್ಲಿ ವೇಗದ ಮಿತಿ 40 ಕಿಲೋ ಮೀಟರ್ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.