ಬೆಂಗಳೂರು : ಮಹಿಳೆ ಅಪಹರಣ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಎಚ್ಡಿ ರೇವಣ್ಣಗೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಹೀಗಾಗಿ ಜಾಮೀನು ವಿಷಯ ತಿಳಿದು ಶಾಸಕ ಎಚ್ ಡಿ ರೇವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಜಾಮೀನು ಮಂಜೂರು ಬಗ್ಗೆ ಜೈಲು ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿಂದಲೇ ದೇವರಿಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ HD ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲಲ್ಲಿ ಕ್ವಾರಂಟೈನ್ ಸೆಲ್ ನಲ್ಲಿ ಇದ್ದಾರೆ.
ಸಂಭ್ರಮಾಚರಣೆಗೆ ತಡೆದ ಪೊಲೀಸರು
ಇತ್ತ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನಲ್ಲಿ ಎಚ್ಡಿ ರೇವಣ್ಣ ಅವರಿಗೆ ಜಾಮೀನು ಮಂಜೂರು ಆದ ವಿಷಯ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ಸಂಭ್ರಮ ಆಚರಣೆ ನಡೆಸಲು ಮುಂದಾಗಿದ್ದಾರೆ. ಹೊಳೆನರಸೀಪುರ ತಾಲೂಕಿನ ಗಾಂಧೀ ಸರ್ಕಲ್ ಬಳಿ ಅವರ ಬೆಂಬಲಿಗರು ಸಂಭ್ರಮಾಚರಣೆಗೆ ಮುಂದಾಗಿದ್ದಾರೆ.
ಈ ವೇಳೆ ಎಚ್ ಡಿ ರೇವಣ್ಣಗೆ ಜಾಮೀನು ಹಿನ್ನೆಲೆ ಸಂಭ್ರಮಾಚರಣೆಗೆ ಯತ್ನಿಸಿದಾಗ ತಡೆಯಲು ಮುಂದಾದ ಪೊಲೀಸರ ಜೊತೆಗೆ ಕಾರ್ಯಕರ್ತರು ವಾಗ್ವಾದ ನಡೆಸಿದ ಘಟನೆ ನಡೆಯಿತು. ರೇವಣ್ಣ ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.