ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠೆಗೆ ರಾಯಭಾರಿಗಳು, ಸಂಸದರು ಸಹಿತ 55 ದೇಶಗಳಿಂದ 100ಕ್ಕೂ ಅಧಿಕ ಗಣ್ಯರು ಆಗಮಿಸಲಿದ್ದಾರೆ ಎಂದು ವಿಶ್ವ ಹಿಂದೂ ಫೌಂಡೇಶನ್‌ನ ಸಂಸ್ಥಾಪಕ ಮುಖ್ಯಸ್ಥ ಸ್ವಾಮಿ ವಿಜ್ಞಾನಾನಂದ ಇತ್ತೀಚಿಗೆ ಹೇಳಿದ್ದಾರೆ. ಅರ್ಜೆಂಟೀನಾ, ಬೆಲಾರಸ್, ಕೆನಡಾ, ಈಜಿಪ್ಟ್, ಫಿನ್‌ಲಾಂಡ್, ಫ್ರಾನ್ಸ್, ಜರ್ಮನಿ, ಹಾಂಕಾಂಗ್, ಸಿಂಗಾಪುರ, ಮ್ಯಾನ್ಮಾರ್, ಥೈಲ್ಯಾಂಡ್, ಅಮೆರಿಕ ಸೇರಿ ಹಲವು ರಾಷ್ಟ್ರಗಳ ಗಣ್ಯರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕೊರಿಯಾದ ರಾಜ ಕಿಮ್ ಸುರೊ ಎಂಬಾತನನ್ನು 2,000 ವರ್ಷಗಳ ಹಿಂದೆ ಮದುವೆಯಾದ ಅಯೋಧ್ಯೆ ಮೂಲದ ರಾಜಕುಮಾರಿ ಹಾಗೂ ಪ್ರಭು ಶ್ರೀರಾಮ ವಂಶಸ್ಥೆ ಎಂದು ನಂಬಲಾಗಿರುವ ಸುರಿರತ್ನ (ಹಿಯೋ ಹ್ವಾಂಗ್ ಒಕೆ) ಅವರ ಕುಟುಂಬಕ್ಕೂ ಮಂದಿರ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಕಿಮ್‌ನನ್ನು ಮದುವೆಯಾದ ಕೊರಿಯಾದಲ್ಲಿ ಕರಕ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಈಕೆಯ ಕುಟುಂಬಸ್ಥರೂ ಇಂದಿಗೂ ಅಲ್ಲಿದ್ದು, ಅವರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದೇವೆ ಎಂದು ಸ್ವಾಮಿ ವಿಜ್ಞಾನಾನಂದ ಹೇಳಿದ್ದಾರೆ. ಉತ್ತರ ಗೋವಾದ ಸತ್ತಾರಿ ತಾಲೂಕಿನ ಮನೆಗಳ ಮೇಲೂ 22ರಂದು ರಾಮನಾಮವಿರುವ ಧ್ವಜ ಹಾರಾಡಲಿದೆ. ಈ ಮೂಲಕ ಸತ್ತಾರಿ ಜನರು ಮಂದಿರ ಪ್ರತಿಷ್ಠಾಪನೆಯನ್ನು ಸಂಭ್ರಮಿಸಲು ಸಜ್ಜುಗೊಂಡಿದ್ದಾರೆ. ಗೋವಾದ ಬಿಜೆಪಿ ನಾಯಕ ವಿಶ್ವಜಿತ್ ರಾಣೆ ಈ ಕುರಿತು ಮಾಹಿತಿ ನೀಡಿ, ಈಗಾಗಲೇ ಮನೆ-ಮನೆಗೂ ರಾಮಧ್ವಜವನ್ನು ಹಸ್ತಾಂತರಿಸಲಾಗುತ್ತಿದೆ ಎಂದಿದ್ದಾರೆ. ರಾಮಲಲ್ಲಾನ ಪ್ರಾಣಪ್ರತಿಷ್ಠೆ ಸಮೀಪಿಸುತ್ತಿರುವಂತೆಯೇ ಎಲ್ಲೆಡೆ ರಾಮನಾಮ ಮೊಳಗುತ್ತಿದೆ. ಇದು ಬರೀ ದೇಶಿಯ ಭಕ್ತರಿಂದ ಮಾತ್ರವಲ್ಲ, ರಾಮನ ಅಖಂಡ ಭಕ್ತರಿಂದಲೂ ಮೊಳಗುತ್ತಿರುವ ಜಪ. ನ್ಯೂಯಾರ್ಕ್ ಮೂಲದವರಾದ ಸೊನಾಲ್ ಸಿಂಗ್ ಎಂಬ ರಾಮಭಕ್ತೆ ಅಮೆರಿಕದಿಂದ ವರ್ಕ್ ಫ್ರಂ ಹೋಂ ಪಡೆದು ಭಾರತದ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ. ಜನವರಿ 22ರಂದು ಇಲ್ಲಿಯೇ 11,000 ಬಾರಿ ರಾಮನಾಮ ಬರೆದು ಪ್ರಾಣಪ್ರತಿಷ್ಠೆ ಸಂಭ್ರಮ ಆಚರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆಯಾಗಿದೆ.