ಬೆಂಗಳೂರು : ಕೇಂದ್ರ ಸರ್ಕಾರವು ಹಿಟ್ ಅಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸ ಕಾನೂನನ್ನು ತಂದಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರ ಸಂಘವು ಅನಿರ್ದಿಷ್ಟ ಅವಧಿ ಮುಷ್ಕರವನ್ನು ಆರಂಭಿಸಿದೆ.
ರಾಜ್ಯದಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಲಾರಿಗಳಿದ್ದು ಇವುಗಳಲ್ಲಿ ಹೆಗಡೆ 90ರಷ್ಟು ಲಾರಿಗಳು ಮುಷ್ಕರಕ್ಕೆ ಬೆಂಬಲ ನೀಡುತ್ತಿವೆ. ಕೇಂದ್ರ ಸರ್ಕಾರದ ಹಿಟ್ ಅಂಡ್ ರನ್ ಪ್ರಕರಣದ ಹೊಸ ಕಾನೂನನ್ನು ವಿರೋಧಿಸುತ್ತಿದ್ದು, ಸರ್ಕಾರ ನಾವು ಬೇಡಿಕೆಗಳನ್ನು ಈಡೇರಿಸುವವರೆಗೂ ಲಾರಿ ನಿಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಫೆಡರೇಶನ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷರಾದ ಬಿ ಚೆನ್ನಾರೆಡ್ಡಿ ತಿಳಿಸಿದರು.
ಹಿಟ್ ಅಂಡ್ ರನ್ಗೆ ಹತ್ತು ವರ್ಷ ಜೈಲು ಶಿಕ್ಷೆ, 7 ಲಕ್ಷ ರೂ. ದಂಡ ವಿಧಿಸುವ ಶಾಸನ, ಇ- ಚಲನ್ ಕಾಯಿದೆ ಲಾರಿ ಮಾಲೀಕರಿಗೆ ಮಾರಕವಾಗಿದೆ. ಹೈಟ್ ಮತ್ತು ಡೋರ್ ಓಪನ್ಗೆ ಇದ್ದ 500 ರೂ. ದಂಡ 20 ಸಾವಿರಕ್ಕೆ ಏರಿಕೆಯಾಗಿದೆ. ಜಿಎಸ್ಟಿ ಬಿಲ್ನಲ್ಲಿ ವ್ಯಾಪಾರಸ್ಥರು ತಪ್ಪು ಮಾಡಿದರೂ ದಂಡ ವಿಧಿಸಲಾಗುತ್ತಿದೆ. ಈ ಹೊಸ ಕಾನೂನಿನಿಂದಾಗಿ ಲಾರಿ ಚಾಲಕ ಮತ್ತು ಮಾಲೀಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಈ ಕೂಡಲೇ ಕರಾಳ ಶಾಸನ ವಾಪಸ್ ಪಡೆಯುವಂತೆ ಲಾರಿ ಮಾಲೀಕರು ಆಗ್ರಹಿಸಿದ್ದಾರೆ.
ಅದೇ ರೀತಿ ದಕ್ಷಿಣ ಭಾರತದ ಲಾರಿ ಅಸೋಸಿಯೇಷನ್ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಈ ಮುಷ್ಕರಕ್ಕೆ ಸಹಕಾರ ನೀಡಿದೆ.ಯಶವಂತಪುರ ಎಪಿಎಂಸಿಗೆ ಪ್ರತಿದಿನ ಸುಮಾರು 60 ಸಾವಿರ ಚೀಲ ಈರುಳ್ಳಿ, ಆಲೂಗಡ್ಡೆ ಬರುತ್ತಿದ್ದುದು ಬುಧವಾರ 30 ಸಾವಿರ ಚೀಲಕ್ಕೆ ಇಳಿಕೆಯಾಗಿದೆ. ಪದಾರ್ಥಗಳ ಆಗಮನಕ್ಕೆ ಯಾವುದೇ ತೊಂದರೆಯಾಗಿಲ್ಲ. ಆದರೆ ಗುರುವಾರದ ಸ್ಥಿತಿ ಹೇಗೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಯಶವಂತಪುರ ಆಲೂಗಡ್ಡೆ, ಈರುಳ್ಳಿ ವರ್ತಕರ ಸಂಘದ ಪದಾಧಿಕಾರಿ ಬಿ. ರವಿಶಂಕರ್ ತಿಳಿಸಿದರು.