ಬೆಂಗಳೂರು : ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಬಳಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿರುವುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಡಿ.28ರಿಂದ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣ ಗೌಡ ಅವರು ಕೊನೆಗೂ ಬಂಧಮುಕ್ತರಾಗಿದ್ದಾರೆ.
ಈ ನಡುವೆ ಜೈಲಿನಿಂದ ಬಿಡುಗಡೆಯಾದ ನಂತರ ಗೌಡರು ಕಾಲು ನೋವಿನಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ತಮ್ಮ ನಾಯಕ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಕರವೇ ಕಾರ್ಯಕರ್ತರು ಸಂಭ್ರಮಿಸಿ ಸಿಹಿ ವಿತರಿಸಿದರು.
ಇದೆ ವೇಳೆ ನಾರಾಯಣಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹೋರಾಟಕ್ಕೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದು, ಕನ್ನಡ ನಾಮಫಲಕ ಆಂದೋಲನ ಯಶಸ್ವಿಯಾಗಿದೆ. ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದು ಕನ್ನಡಿಗರ ಜಯ, ಕರ್ನಾಟಕ ರಕ್ಷಣಾ ವೇದಿಕೆಯ ಜಯ.
ಈ ಹೋರಾಟವನ್ನು ಬೆಂಬಲಿಸಿದ ಎಲ್ಲ ಕನ್ನಡಪರ ಚಳವಳಿಗಾರರಿಗೆ, ಮಾಧ್ಯಮಮಿತ್ರರಿಗೆ, ಕರವೇ ಮುಖಂಡರು, ಕಾರ್ಯಕರ್ತರಿಗೆ, ಜನಸಾಮಾನ್ಯರಿಗೆ ಕೃತಜ್ಞತೆಗಳು ಎಂದು ಫೇಸ್ಬುಕ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುವುದು ನಮ್ಮ ಉದ್ದೇಶವಾಗಿತ್ತು.
ಕೆಲವೊಮ್ಮೆ ಹೋರಾಟದಲ್ಲಿ ತೊಡಕಾಗುವುದು ಸಹಜ 15 ದಿನ ನಾನು ಮತ್ತು ಕಾರ್ಯಕರ್ತರು ಜೈಲಿನಲ್ಲಿದ್ದೆವು ಇನ್ನು ಅನೇಕ ಕೆಲಸಗಳಿವೆ ಕಾನೂನು ಹೋರಾಟ ಮಾಡುತ್ತೇವೆ ಆರೋಗ್ಯದ ಸಮಸ್ಯೆಯಿಂದ ಯಾರ ಜೊತೆಯೂ ಮಾತನಾಡಲು ಆಗಿಲ್ಲ ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ?
ನಾಮಫಲಕ ಅಳವಡಿಕೆ ವಿಚಾರದಲ್ಲಿ ಪ್ರತಿಭಟನೆ ನಡೆಸಿ ಚಿಕ್ಕಜಾಲ ಠಾಣಾ ಪೊಲೀಸರಿಂದ ಡಿ.28ಕ್ಕೆ ನಾರಾಯಣಗೌಡ ಮೊದಲು ಬಂಧನಕ್ಕೆ ಒಳಗಾಗಿದ್ದರು. ನಂತರ ಜಾಮೀನು ಸಿಕ್ಕರೂ ವಿವಿಧ ಕೇಸಿನಲ್ಲಿ ಬಂಧಿಸಿ ಅವರನ್ನು ಜೈಲಲ್ಲೇ ಇಡಲಾಗಿತ್ತು.
ಈ ನಡುವೆ ವಿವಿಧ ಕೇಸಿನಲ್ಲಿ ಜಾಮೀನು ಲಭಿಸಿ, ಗೌಡ ಅವರು ಜಾಮೀನು ಮೇಲೆ ಮಂಗಳವಾರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ 2017ರಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದದ್ದರು. ಹೀಗಾಗಿ ಅವರು ಮತ್ತೆ ಜೈಲು ಪಾಲಾಗಿದ್ದರು.
ಇದರಿಂದ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನು ಬುಧವಾರ ಬೆಳಗ್ಗೆ ಪುರಸ್ಕರಿಸಿದ ನಗರದ 30ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು
ಮಾಡಿತ್ತು. ಇದಾದ ಬೆನ್ನಲ್ಲೇ 2020ರಲ್ಲಿ ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದ ಪ್ರಕರಣ ಸಂಬಂಧ ಸಂಜೆ 4 ಗಂಟೆಗೆ ಹಲಸೂರು ಗೇಟ್ ಠಾಣಾ ಪೊಲೀಸರು ನಾರಾಯಣಗೌಡ ಅವರನ್ನು ಬಂಧಿಸಿದ್ದರು ಹಾಗೂ ವೈದ್ಯಕೀಯ ತಪಾಸಣೆ ನಡೆಸಿ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಇದರಿಂದ ಜಾಮೀನು ಕೋರಿ ಅವರ ಪರ ವಕೀಲರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ 1ನೇ ಎಸಿಎಂಎಂ ನ್ಯಾಯಾಲಯ, 50 ಸಾವಿರ ರು. ವೈಯಕ್ತಿಕ ಬಾಂಡ್ ಮತ್ತು 5 ಸಾವಿರ ರು. ನಗದಿನ ಭದ್ರತಾ ಖಾತರಿ ಪಡೆದು ಜಾಮೀನು ಮಂಜೂರು ಮಾಡಿತು. ಜೊತೆಗೆ, ಮುಂದಿನ ದಿನಗಳಲ್ಲಿ ನ್ಯಾಯಾಲಯದ ಎಲ್ಲಾ ವಿಚಾರಣೆಗಳಿಗೆ ಕಡ್ಡಾಯವಾಗಿ ಖುದ್ದು ಹಾಜರಾಬೇಕು ಎಂಬುದು ಸೇರಿದಂತೆ ಇನ್ನಿತರ ಕೆಲ ಷರತ್ತುಗಳನ್ನು ವಿಧಿಸಿತು. ಈ ಆದೇಶದ ಮೇರೆಗೆ ನಾರಾಯಣಗೌಡ ಅವರನ್ನು ಬುಧವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.