ಬೆಂಗಳೂರು : ನೆರೆಯ ತೆಲಂಗಾಣದ ರೀತಿ ಕರ್ನಾಟಕದಲ್ಲಿಯೂ ಚಿತ್ರಮಂದಿರಗಳನ್ನು ಬಂದ್ ಮಾಡಬೇಕೆ ಎಂಬ ಬಗ್ಗೆ ಚಿತ್ರರಂಗದ ನಿರ್ಮಾಪಕರು, ಪ್ರದರ್ಶಕರ ಸಂಘ ಫಿಲಂ ಚೇಂಬರ್ ನೇತೃತ್ವದಲ್ಲಿ ಇಂದು ಸುದೀರ್ಘ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಿದೆ. ಫಿಲಂ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್ ಯಾವುದೇ ಕಾರಣಕ್ಕೂ ಕನ್ನಡ ಚಿತ್ರರಂಗ, ಚಿತ್ರರಂಗಗಳನ್ನು ಬಂದ್ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಚಿತ್ರಮಂದಿರಗಳ ಸಮಸ್ಯೆ ಹಾಗೂ ಚಿತ್ರರಂಗದ ಸಮಸ್ಯೆ ಬಗ್ಗೆ ಕುಲಂಕುಶವಾಗಿ ಚರ್ಚೆ ನಡೆಯಿತು. ಹಲವು ನಿರ್ಮಾಪಕರು ಸಭೆಯಲ್ಲಿ ಭಾಗಿಯಾಗಿದ್ದರು. ಚಿತ್ರಮಂದಿರಗಳನ್ನು ಬಂದ್ ಮಾಡುತ್ತೀವಿ ಎಂದು ಈ ಹಿಂದೆಯೂ ನಾವು ಹೇಳಿರಲಿಲ್ಲ. ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದೆವು, ಪ್ರದರ್ಶಕರನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನುವ ಬಗ್ಗೆ ಚರ್ಚೆಯಾಯಿತು. ಈ ಸೂಕ್ಷ್ಮ ವಿಚಾರದ ಬಗ್ಗೆ ಬಗ್ಗೆ ಸರ್ಕಾರದ ಜೊತೆ ಚರ್ಚೆ ಮಾಡ್ತಿವಿ ಎಂದು ಸುರೇಶ್ ತಿಳಿಸಿದರು.
ಬಂದ್ ಮಾಡುತ್ತೀವಿ ಅಂತ ಘೋಷಣೆ ಮಾಡಿಲ್ಲ, ಆದರೂ ಆ ಸುದ್ದಿ ಹರಿದಾಡಿ ಚಿತ್ರರಂಗದ ವ್ಯವಹಾರಕ್ಕೆ ತೊಂದರೆ ಆಗಿದೆ. ಓಟಿಟಿ ರೈಟ್ಸ್ ಗೆ ಜೊತೆಗೆ ಬೇರೆ ಭಾಷೆಗಳಲ್ಲಿ ಸಿನಿಮಾಗಳ ಮಾರ್ಕೆಟ್ ಗೆ ಸಮಸ್ಯೆ ಆಗಿದೆ, ಮಲ್ಟಿಪ್ಲೇಕ್ಸ್ ಗಳಲ್ಲಿ ರೇಟ್ ಆಫ್ ಅಡ್ಮಿಷನ್ ಬಗ್ಗೆ ಭಿನ್ನಾಭಿಪ್ರಾಯವಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುತ್ತೆ, ಚಿತ್ರರಂಗದ ಪುನಶ್ಚೇತನಕ್ಕೆ ಸರ್ಕಾರದ ಬೆಂಬಲ ಬೇಕಿದೆ ಎಂದರು.
ನೆರೆಯ ತೆಲಂಗಾಣದಲ್ಲಿ ಜನರಿಲ್ಲದೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ನಡೆಸುವುದು ಕಷ್ಟವಾಗುತ್ತಿರುವ ಕಾರಣದಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡುವ ನಿರ್ಧಾರ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಚಿತ್ರಮಂದಿರಗಳು ಅನುಭವಿಸುತ್ತಿರುವ ನಷ್ಟದಿಂದ ಪಾರಾಗಲು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡಬೇಕು ಎಂಬ ಚರ್ಚೆ ಜೋರಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಂದು ಚಿತ್ರರಂಗದ ಪ್ರಮುಖರ ಸಭೆ ನಡೆದಿದ್ದು, ತೀರ್ಮಾನ ಪ್ರಕಟವಾಗಿದೆ.