ವ್ಯಾಟಿಕನ್ ಸಿಟಿ: ಇರಾನ್ ವಿರುದ್ಧ ಅಮೆರಿಕ ಸಾರಿರುವ ಯುದ್ಧದ ವಿಚಾರವಾಗಿ ವಿಶ್ವದ ಇಬ್ಬರು ಪ್ರಭಾವಿ ನಾಯಕರ ನಡುವಿನ ಸಂಘರ್ಷ ಈಗ ಬೀದಿಗೆ ಬಂದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೋಪ್ ಲಿಯೋ XIV ಅವರನ್ನು ಕಟುವಾಗಿ ಟೀಕಿಸಿದ್ದು, “ಪೋಪ್ ಅವರು ವಿದೇಶಾಂಗ ನೀತಿಯಲ್ಲಿ ಭಯಾನಕವಾಗಿದ್ದಾರೆ ಮತ್ತು ಅಪರಾಧಗಳ ವಿರುದ್ಧ ಮೃದು ಧೋರಣೆ ಹೊಂದಿದ್ದಾರೆ” ಎಂದು ಗುಡುಗಿದ್ದಾರೆ.
ಅಮೆರಿಕ ಮೂಲದವರೇ ಆದ ಪೋಪ್ ಲಿಯೋ XIV ಅವರು ಇತ್ತೀಚೆಗೆ ಇರಾನ್ ಮೇಲಿನ ಅಮೆರಿಕದ ಮಿಲಿಟರಿ ಕ್ರಮವನ್ನು “ಅಸ್ವೀಕಾರಾರ್ಹ” ಎಂದು ಕರೆದಿದ್ದಕ್ಕೆ ಟ್ರಂಪ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
“ಪೋಪ್ ಲಿಯೋ ಅವರು ಅಪರಾಧಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ (Weak on Crime). ಇರಾನ್ ಅಣ್ವಸ್ತ್ರ ಹೊಂದುವುದನ್ನು ಅವರು ಬೆಂಬಲಿಸುತ್ತಿರುವಂತೆ ಕಾಣುತ್ತಿದೆ, ಇದನ್ನು ನಾನು ಸಹಿಸುವುದಿಲ್ಲ” ಎಂದು ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಪೋಪ್ ಅವರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು ಧಾರ್ಮಿಕ ನಾಯಕತ್ವದ ಕಡೆಗೆ ಗಮನ ಹರಿಸಲಿ. ಅವರ ಇಂತಹ ನಿಲುವುಗಳಿಂದ ಕ್ಯಾಥೋಲಿಕ್ ಚರ್ಚ್‌ಗೆ ಹಾನಿಯಾಗುತ್ತಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
“ನಾನು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದು ಅಮೆರಿಕದ ಹಿತಾಸಕ್ತಿ ಕಾಪಾಡಲು. ನಮ್ಮ ದೇಶದ ಆರ್ಥಿಕತೆ ಮತ್ತು ಸುರಕ್ಷತೆಗಾಗಿ ನಾನು ತೆಗೆದುಕೊಳ್ಳುವ ನಿರ್ಧಾರಗಳನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ” ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಇರಾನ್ ಮೇಲಿನ ಯುದ್ಧವನ್ನು ನಿಲ್ಲಿಸುವಂತೆ ಜಗತ್ತಿನ ನಾಯಕರಿಗೆ ಕರೆ ನೀಡಿರುವ ಪೋಪ್, “ಶಕ್ತಿಯ ಪ್ರದರ್ಶನ ಸಾಕು, ಯುದ್ಧವನ್ನು ನಿಲ್ಲಿಸಿ. ಇದು ಶಾಂತಿ ಮತ್ತು ಸಂಧಾನದ ಸಮಯ” ಎಂದು ಹೇಳಿದ್ದರು. ಇರಾನ್‌ನ ನಾಗರಿಕತೆಯನ್ನೇ ನಾಶಪಡಿಸುವ ಟ್ರಂಪ್ ಅವರ ಬೆದರಿಕೆಯನ್ನು “ಅತ್ಯಂತ ಅಪಾಯಕಾರಿ ಮತ್ತು ಅಮಾನವೀಯ” ಎಂದು ಪೋಪ್ ಬಣ್ಣಿಸಿದ್ದರು.






