ಮೈಸೂರು : ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರು ಹೇಳಿಕೆಗೆ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ನೀನು ಒಂದು ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದೀಯ ಅವಳ ನೋವು ಅರ್ಥ ಆಗುತ್ತಾ? ಎಂದು HD ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಏಕವಚನದಲ್ಲಿ ಕಿಡಿ ಕಾರಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ ವಿ ಕ್ರಾಸ್ ನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು,ಎಚ್ ಡಿ ಕುಮಾರಸ್ವಾಮಿ ಹೇಳಿಕೆಯನ್ನು ಕ್ಷಮಿಸಲು ಯಾರಿಂದಲೂ ಆಗಲ್ಲ. ನನ್ನ ತಾಯಂದಿರು ಅಕ್ಕಂದಿರು ಅವರ ತಾಯಿಯ ಮನೆಗೆ ಹೋಗೋಕೆ, ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಸ್ ನಲ್ಲಿ ಹೋದರೆ ದಾರಿ ತಪ್ಪಿದ್ದಾರೆ ಅಂತೀರಾ? ಇಂತಹ ಹೇಳಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಎಚ್ ಡಿ ಕುಮಾರಸ್ವಾಮಿ ಅವರನ್ನು ಕ್ಷಮೆ ಕೇಳಿ ಅಂತ ಹೇಳ್ತಿರಲ್ಲ ಇದು ನಿಮ್ಮ ಜವಾಬ್ದಾರಿ. ಈಗಾಗಲೇ ಹೆಣ್ಣುಮಕ್ಕಳು ಧರಣಿ ಆರಂಭಿಸಿದ್ದಾರೆ.ದೇಶದಲ್ಲೆಡೆ ನಿಮ್ಮ ಹೇಳಿಕೆ ಕುರಿತಂತೆ ಹೊತ್ತಿಕೊಂಡು ಉರಿಯುತ್ತಿದೆ. ಕುಮಾರಸ್ವಾಮಿ ಹೇಳಿಕೆಯಿಂದ ನನಗೆ ಇಂದು ಅತಿ ಹೆಚ್ಚು ದುಃಖ ತಂದಿದೆ. ಮಾನ್ಯ ಕುಮಾರಸ್ವಾಮಿ ದೇಶದ ಪ್ರಧಾನಿಯಾಗಿದ್ದ ದೇವೇಗೌಡರ ಮಗ ಈ ಭೂಮಿಯಲ್ಲಿ ದೊಡ್ಡ ಸ್ಥಾನ ಹೊತ್ತ ದೊಡ್ಡ ಕುಟುಂಬ ಎಂದರು.
ಎಚ್ ಡಿ ದೇವೇಗೌಡರ ಮನೆಯಲ್ಲಿ ಎಂಎಲ್ಎ ಎಂಪಿಗಳು ಇದ್ದಾರೆ. ಜನರ ಬದುಕಿಗೆ ಶಕ್ತಿ ಕೊಡಬೇಕು ಅಂತ ಜನರಿಗೆ ಐದು ಗ್ಯಾರಂಟಿ ನೀಡಿದ್ದೇವೆ.ಧೀಮಂತ ಮಹಿಳೆ ಇಂದ್ರಾಗಾಂಧಿ ನಿಧನರಾದಾಗ ಮನಸ್ಸಿಗೆ ನೋವಾಗಿತ್ತು ಅದು ಆದ್ಮೇಲೆ ಇಂದು ಮನಸ್ಸಿಗೆ ದುಃಖವಾಗುತ್ತಿದೆ ಎಂದು ತುಮಕೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಷಣದ ವೇಳೆ ತಿಳಿಸಿದರು.