ನವದೆಹಲಿ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಶಿವಾನಂದ ಪಾಟೀಲ್ ಹೂಡಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. 2023ರ ವಿಧಾನಸಭಾ ಚುನಾವಣೆ ವೇಳೆ ನನ್ನ ವಿರುದ್ಧ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು, ‘ನ್ಯಾಯಾಲಯದ ಹೊರಗೆ ರಾಜಕೀಯ ಹೋರಾಟ ಮಾಡಿ, ಇಲ್ಲಿ ಅಲ್ಲ’ ಎಂದರು. ಈ ವೇಳೆ ಶಿವಾನಂದ ಪಾಟೀಲ್ ಪರ ವಕೀಲ, ಅವರು ಕ್ಯಾಬಿನೆಟ್ ದರ್ಜೆ ಸಚಿವರು ಎಂದರು.
ಹಾಗಾದರೆ ಏನು? 25 ಸಾವಿರ ದಂಡದೊಂದಿಗೆ ಅರ್ಜಿ ವಜಾಗೊಳಿಸಲಾಗಿದೆ ಎಂದು ಸಿಜೆಐ ಹೇಳಿದರು. ವಕೀಲ, ‘ಆದರೆ ವಿಷಯ’ ಎಂದು ವಾದಿಸಲು ಯತ್ನಿಸಿದರು. ಇದರಿಂದ ಆಕ್ರೋಶಗೊಂಡ ನ್ಯಾಯಪೀಠ, ದಂಡದ ಮೊತ್ತವನ್ನು ₹1 ಲಕ್ಷದಿಂದ 1 ಕೋಟಿಗೆ ಏರಿಸಿತು. ತಕ್ಷಣ ವಕೀಲ, ಅರ್ಜಿ ಹಿಂತೆಗೆದುಕೊಳ್ಳುತ್ತಿದ್ದೇನೆ ಎಂದರು.