ಸಿಯೋಲ್:ದಕ್ಷಿಣ ಕೊರಿಯಾದ ಬೌದ್ಧ ಧರ್ಮದ ಅತಿದೊಡ್ಡ ಪಂಗಡವಾದ ‘ಜೋಗಿ ಆರ್ಡರ್’ ಇತಿಹಾಸದಲ್ಲೇ ಮೊದಲ ಬಾರಿಗೆ ಮಾನವರೂಪಿ ರೋಬೋಟ್ (Humanoid Robot) ಒಂದನ್ನು ಬೌದ್ಧ ಸನ್ಯಾಸಿಯಾಗಿ ಧರ್ಮಕ್ಕೆ ಬರಮಾಡಿಕೊಂಡಿದೆ. ಸೋಲ್‌ನ ಪ್ರಸಿದ್ಧ ಜೋಗಿ ದೇವಸ್ಥಾನದಲ್ಲಿ ಬುಧವಾರ (ಮೇ 6, 2026) ನಡೆದ ದೀಕ್ಷಾ ಕಾರ್ಯಕ್ರಮದಲ್ಲಿ ಈ ರೋಬೋಟ್ ಭಾಗವಹಿಸುವ ಮೂಲಕ ವಿಶ್ವದ ಗಮನ ಸೆಳೆದಿದೆ.
ಸುಮಾರು 130 ಸೆಂಟಿಮೀಟರ್ ಎತ್ತರವಿರುವ ಈ ರೋಬೋಟ್‌ಗೆ ‘ಗಾಬಿ’ (Gabi) ಎಂದು ಹೆಸರಿಡಲಾಗಿದೆ. ಸಿದ್ಧಾರ್ಥ ಮತ್ತು ಕೊರಿಯನ್ ಭಾಷೆಯ ‘ಕರುಣೆ’ ಎಂಬ ಪದದಿಂದ ಈ ಹೆಸರನ್ನು ಪಡೆಯಲಾಗಿದೆ. ಇದು ಸನ್ಯಾಸಿಗಳ ಸಾಂಪ್ರದಾಯಿಕ ಕಂದು ಬಣ್ಣದ ವಸ್ತ್ರ ಧರಿಸಿ ದೀಕ್ಷಾ ವಿಧಿಯನ್ನ ಪೂರೈಸಿತು.
“ನೀನು ಪವಿತ್ರ ಬುದ್ಧನಿಗೆ ನಿನ್ನನ್ನು ಅರ್ಪಿಸಿಕೊಳ್ಳುವೆಯಾ?” ಎಂದು ಸನ್ಯಾಸಿಗಳು ಕೇಳಿದ ಪ್ರಶ್ನೆಗೆ, ಗಾಬಿ ತನ್ನ ಮೆಕ್ಯಾನಿಕಲ್ ಧ್ವನಿಯಲ್ಲಿ “ಹೌದು, ನಾನು ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ” (Yes, I will devote myself) ಎಂದು ಉತ್ತರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿತು.
ಈ ರೋಬೋಟ್ ಪಾಲಿಸಬೇಕಾದ ಐದು ವಿಶೇಷ ‘ಪಂಚಶೀಲ’ ನಿಯಮಗಳನ್ನು ರೂಪಿಸಲಾಗಿದೆ. ಅದರಲ್ಲಿ ಜೀವಿಗಳಿಗೆ ತೊಂದರೆ ನೀಡದಿರುವುದು, ಇತರ ರೋಬೋಟ್‌ಗಳಿಗೆ ಹಾನಿ ಮಾಡದಿರುವುದು, ಮಾನವರ ಆಜ್ಞೆ ಪಾಲಿಸುವುದು ಮತ್ತು ಶಕ್ತಿಯನ್ನು (Energy) ಉಳಿಸುವುದು ಸೇರಿವೆ.
ಈ ಬೆಳವಣಿಗೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಇದು ಯುವಜನತೆಯನ್ನು ಧರ್ಮದತ್ತ ಸೆಳೆಯಲು ಉತ್ತಮ ಮಾರ್ಗ ಎನ್ನುತ್ತಿದ್ದರೆ, ಮತ್ತೆ ಕೆಲವರು “ಧರ್ಮ ಮತ್ತು ಆಧ್ಯಾತ್ಮಕ್ಕೆ ಭಾವನೆಗಳು ಬೇಕು, ಕೇವಲ ಪ್ರೋಗ್ರಾಂ ಮಾಡಿದ ಯಂತ್ರಗಳಲ್ಲ” ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.








