ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಪವನ್ನು ಇರಾನ್ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಟ್ರಂಪ್ ಅವರ ಹೇಳಿಕೆಗಳು “ಸಂಪೂರ್ಣ ಆಧಾರರಹಿತ” ಎಂದು ಕರೆದಿರುವ ಇರಾನ್, ವಾಸ್ತವದಲ್ಲಿ ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿ ಮೂವರು ಭಾರತೀಯ ನಾವಿಕರ ಸಾವಿಗೆ ಕಾರಣವಾಗಿದ್ದು ಅಮೆರಿಕ ಮಿಲಿಟರಿ ಎಂದು ಗಂಭೀರ ತಿರುಗೇಟು ನೀಡಿದೆ.
ಇದರೊಂದಿಗೆ, ಭಾರತೀಯ ಸಿಬ್ಬಂದಿ ಇದ್ದ ಹಡಗುಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಜಾಗತಿಕ ಸೂಪರ್ ಪವರ್ ಅಮೆರಿಕ ಮತ್ತು ಇರಾನ್ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮೇಲ್ ಬಕಾಯಿ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ಭಾರತೀಯ ಸಿಬ್ಬಂದಿಯನ್ನು ಒಳಗೊಂಡ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕದ ಪಡೆಗಳು ದಾಳಿ ನಡೆಸಿವೆ. ಈ ಬೇಜವಾಬ್ದಾರಿತನದ ದಾಳಿಯಲ್ಲಿ ಮೂವರು ಅಮಾಯಕ ಭಾರತೀಯ ನಾಗರಿಕರು ಸಾವನ್ನಪ್ಪಿದ್ದಾರೆ. ಅಮೆರಿಕದ ಇಂತಹ ಮಿಲಿಟರಿ ಕೃತ್ಯಗಳು ಜಾಗತಿಕ ಶಾಂತಿ ಮತ್ತು ಸಮುದ್ರ ಸುರಕ್ಷತೆಗೆ ದೊಡ್ಡ ಧಕ್ಕೆಯನ್ನು ಉಂಟುಮಾಡುತ್ತವೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ, ದುರಂತದಲ್ಲಿ ಮಡಿದ ಭಾರತೀಯ ನಾವಿಕರ ಕುಟುಂಬಗಳಿಗೆ ಮತ್ತು ಭಾರತ ಸರ್ಕಾರಕ್ಕೆ ಇರಾನ್ ತನ್ನ ಆಳವಾದ ಸಂತಾಪವನ್ನು ಸೂಚಿಸಿದೆ.
ಅಮೆರಿಕದೊಂದಿಗಿನ ಶಾಂತಿ ಒಪ್ಪಂದದ ನಿಯಮಗಳನ್ನು ಇರಾನ್ ಮಾಧ್ಯಮಗಳಿಗೆ ಲೀಕ್ ಮಾಡಿದೆ ಮತ್ತು ಆ ನಿಯಮಗಳು ಸುಳ್ಳು ಎಂಬ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೂ ಇರಾನ್ ತಿರುಗೇಟು ನೀಡಿದೆ. ಮಾತುಕತೆಯ ನಿಯಮಗಳು ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅಮೆರಿಕವು ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಿದೆ ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ವಾರ ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮೂರು ಹಡಗುಗಳು ದಾಳಿಗೆ ಒಳಗಾಗಿದ್ದವು. ಇದರಲ್ಲಿ ಮೂವರು ಭಾರತೀಯರು ಮೃತಪಟ್ಟ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಈಗಾಗಲೇ ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರಿಗೆ ಸಮನ್ಸ್ ಜಾರಿ ಮಾಡಿ ತೀವ್ರ ಪ್ರತಿಭಟನೆ ದಾಖಲಿಸಿದೆ. ಇದರ ಬೆನ್ನಲ್ಲೇ ಅಮೆರಿಕ ಇರಾನ್ ಮೇಲೆ, ಇರಾನ್ ಅಮೆರಿಕದ ಮೇಲೆ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ.








