ವಿಜಯಪುರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಸೋಲಿಸಲು ಅಪಾರ ಪ್ರಮಾಣದ ಹಣ ಬಿಜೆಪಿ ಮೂಲದಿಂದಲೇ ಹೋಗಿದೆ. ದೊಡ್ಡ ದೊಡ್ಡ ಜವಾಬ್ದಾರಿ ಇದ್ದವರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂಬುದು ಹೈಕಮಾಂಡ್ ಗಮನಕ್ಕೆ ಬಂದಿದೆ. ಕ್ರಮಕೈಗೊಳ್ಳುತ್ತಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಸತ್ಯ ಶೋಧನಾ ಸಮಿತಿ ಆಗಬೇಕೆಂದು ಯತ್ನಾಳ್ ಒತ್ತಾಯಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪರಾಜೆ ಹೊಂದಿದ ಅಭ್ಯರ್ಥಿಗಳು ಹಾಗೂ ಗೆದ್ದ ಅಭ್ಯರ್ಥಿಗಳ ದೂರುಗಳು ಸಹ ಇವೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡ ವಿ. ಸೋಮಣ್ಣ ಅವರ ದೂರು ಇದೆ ಎಂದು ಅವರು ತಿಳಿಸಿದರು.
ದೊಡ್ಡ ದೊಡ್ಡ ಜವಾಬ್ದಾರಿ ಇರುವವರು ಈ ರೀತಿ ಮಾಡುವುದರಿಂದ ಪಕ್ಷಕ್ಕೆ ಒಳಿತಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 350 ರಿಂದ 400 ಸ್ಥಾನಗಳು ಬರುತ್ತವೆ ಎಂದು ನಿರೀಕ್ಷೆ ಇಟ್ಟಿದ್ದೆವು. ಬಹಳ ಕಡೆ ಗದ್ದಲವಾಗಿದೆ. ಲೋಕಸಭಾ ಸದಸ್ಯರು ಕೂಡ ಜನಪ್ರಿಯ ಕಳೆದುಕೊಂಡಿದ್ದರು ಜೊತೆಗೆ ಜನರೊಂದಿಗೆ ಸಂಪರ್ಕ ಹೊಂದಿರಲಿಲ್ಲ ಮತ್ತು ಕೆಲಸ ಮಾಡಿರಲಿಲ್ಲ. ಕಾರ್ಯಕರ್ತರ ಜೊತೆ ಶಾಸಕರ ಜೊತೆ ಒಳ್ಳೆ ಸಂಬಂಧ ಇಟ್ಟುಕೊಂಡಿರಲಿಲ್ಲ. ಹೀಗಾಗಿ ಸೋಲಿಗೆ ಇವು ಕೂಡ ಕಾರಣವಾಗಿದೆ ಎಂದರು.
ಅಲ್ಲಿ ಮೋದಿ ಅವರದು ಹಾಗೂ ಪಕ್ಷದ್ದು ಯಾವ ತಪ್ಪಿಲ್ಲ. ಅಭ್ಯರ್ಥಿಗಳ ಕುರಿತು ವಿರೋಧ ಇದ್ದಾಗ ಬಿಟ್ಟು ಕೊಡಬೇಕಿತ್ತು. ವಿಜಯಪುರ ಲೋಕಸಭಾ ಅಭ್ಯರ್ಥಿ ರಮೇಶ್ ಜಿಗಜಿಣಗಿ ಹಾಗೂ ನಮ್ಮ ನಡುವೆ ಜಗಳವಿತ್ತು ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಿದ್ದೇವೆ. ಪಕ್ಷ ಹಾಗೂ ದೇಶದ ವಿಚಾರ ಬಂದಾಗ ಒಂದಾಗಬೇಕು. ಒಂದು ಲೋಕಸಭಾ ಸ್ಥಾನ ಕಳೆದುಕೊಂಡರೆ ಮೋದಿಯವರನ್ನೇ ಕಳೆದುಕೊಂಡರಂತೆ ಆಗುತ್ತದೆ. ಮುಂದಿನ ದಿನಗಳಲ್ಲಿ ಸರಿ ಮಾಡಲಾಗುತ್ತದೆ. ಇವೆಲ್ಲ ವಿಚಾರಗಳಿಂದ ಪಕ್ಷದಲ್ಲಿ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.