ಬೆಂಗಳೂರು : ಒಂದು ಕಡೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚುತ್ತಿದ್ದು ಮತ್ತೊಂದೆಡೆ ರಾಜ್ಯದಲ್ಲಿ ಅತಿಯಾದ ಬಿಸಿಲಿನ ತಾಪಮಾನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಇಂದು ರಾಜ್ಯದ 25 ಜಿಲ್ಲೆಗಳಲ್ಲಿ 40 ಕ್ಕೂ ಹೆಚ್ಚು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ರಾಜ್ಯದ ಜನತೆಗೆ ಈ ವರ್ಷದ ಮಳೆಗಾಲ ಆರಂಭಕ್ಕೂ ಮುನ್ನವೇ ನೆತ್ತರನ್ನು ಸುಡುವ ಬೇಸಿಗೆ ಆರಂಭವಾಗಿದೆ. ನಮ್ಮ ರಾಜ್ಯದ 29 ಜಿಲ್ಲೆಗಳ ಪೈಕಿ 25 ಜಿಲ್ಲೆಗಳಲ್ಲಿಯೂ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಹಾಗೂ ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯಲ್ಲಿ ಮಾತ್ರ 40 ಡಿಗ್ರಿ ಸೆಲ್ಸಿಯಸ್‌ನಿಂದ ಕಡಿಮೆ ಉಷ್ಣಾಂಶವಿದೆ.
ನಿನ್ನೆ ಕಲಬುರ್ಗಿ ಜಿಲ್ಲೆಯ ಕಾಳಗಿ ಹೋಬಳಿಯಲ್ಲಿ ಅತ್ಯಧಿಕ 46.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇಂದು ಕೂಡ ರಾಯಚೂರಿನಲ್ಲಿ 46 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಅತಿ ಹೆಚ್ಚು 46 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದೆ.ಉಳಿದಂತೆ ಬೆಂಗಳೂರು ನಗರದ ನೆರೆಹೊರೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ 40.6, ರಾಮನಗರ 42, ಕೋಲಾರ 43, ಚಿಕ್ಕಬಳ್ಳಾಪುರ 41 ಡಿಡ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವ ವರದಿಯಾಗಿದೆ.